ಜೆಡಿಎಸ್‌ಗೆ ಸುರೇಶ್‌ಗೌಡ ರಾಜಿನಾಮೆ (ಸುದ್ದಿ ಸಂಕ್ಷೇಪ)
ಮೈಸೂರು: ಜೆಡಿಎಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ವಿರೋಧಿಸಿ ಕರ್ನಾಟಕ ಪ್ರದೇಶ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ನೀಡಿದ್ದೇನೆ ಎಂದು ಎಂ.ಜೆ. ಸುರೇಶ್‌ಗೌಡ ತಿಳಿಸಿದರು. ಹಲವಾರು ವರ್ಷಗಳಿಂದ ಪಕ್ಷದ ಸಂಘಟನೆಗೆ ಶಕ್ತಿಮೀರಿ ನಗರ ಮತ್ತು ಜಿಲ್ಲೆಯಲ್ಲಿ ವಿದ್ಯಾರ್ಥಿ ಜೆಡಿಎಸ್ ಅಧ್ಯಕ್ಷನಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದ್ದೇನೆ. ಯುವ ಜೆಡಿಎಸ್ ಕಾರ್ಯಾಧ್ಯಕ್ಷನಾಗಿದ್ದಾಗ ಯುವಕರನ್ನು ಸಂಘಟಿಸಿ ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ. ಈ ನಡುವೆ ಚಾಮರಾಜ ಕ್ಷೇತ್ರದಲ್ಲಿ ನಮ್ಮ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿ ವಿರೋಧಿಸುತ್ತಾ ಬಂದಿದ್ದರೂ ಇದೀಗ ಬಿಜೆಪಿಯಲ್ಲಿ ನಿರ್ಲಕ್ಷಿಸಿರುವ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿರೋಧ ವ್ಯಕ್ತಪಡಿಸಿದರು. ಈ ಅನ್ಯಾಯವನ್ನು ಕೇವಲ ಚಾಮರಾಜ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಹುಣಸೂರು, ಚಾಮುಂಡೇಶ್ವರಿ, ಎನ್.ಆರ್. ಕ್ಷೇತ್ರದಲ್ಲಿ ಮುಂದುವರಿಸಲಾಗುತ್ತಿದೆ. ಈ ರೀತಿಯ ಅಸಹ್ಯಕರ ಬೆಳವಣಿಗೆಯಿಂದ ಮನನೊಂದು ನಾನು ಪಕ್ಷಕ್ಕೆ ರಾಜಿನಾಮೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಹಿತೈಷಿಗಳೊಂದಿಗೆ ಚರ್ಚಿಸಿ ಬೆಳೆಯುತ್ತಿರುವ ಪಕ್ಷಕ್ಕೆ ಸೇರಿ ಸಾಮಾನ್ಯ ಕಾರ್ಯಕರ್ತನಂತೆ ದುಡಿಯುತ್ತೇನೆ ಎಂದರು. ಯುವ ಮುಖಂಡರಾದ ವೈ. ನಾಗರಾಜು, ನಂದೀಶ್ ಇದ್ದರು.
ಚಂದನದಲ್ಲಿ ಡಾ. ಮಾಲಿನಿ
ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಆರೋಗ್ಯ ಭಾರತ ಕಾರ್ಯಕ್ರಮದಲ್ಲಿ ಫೆ.12ರ ರಾತ್ರಿ 7.30ಕ್ಕೆ ಮೈಸೂರು ವಿವಿ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸುತ್ತೂರು ಎಸ್. ಮಾಲಿನಿ ಅವರು ಕ್ಯಾನ್ಸರ್ ಹಾಗೂ ಜೆನಿಟಿಕ್ಸ್‌ಗಿರುವ ಸಂಬಂಧ ಕುರಿತು ಉಪನ್ಯಾಸ ನೀಡುವರು.
ಕಮಾನು ರಚನೆ ಕಾರ್ಯಾಗಾರ
ಎಂಜಿನಿಯರುಗಳ ಸಂಸ್ಥೆಯು ಫೆ.13 ರ ಸಂಜೆ 6ಕ್ಕೆ ಆಧುನಿಕ ವಸ್ತುಗಳನ್ನು ಬಳಸಿ ಉದ್ದದ ಕಮಾನು ರಚನೆ ಕುರಿತ ವೃತ್ತಿಪರ ಎಂಜಿನಿಯರ್ ಡಾ. ಹೇಮಂತ್ ಕೆ. ತಿಪ್ಪೇಸ್ವಾಮಿ ಅವರಿಂದ ಉಪನ್ಯಾಸ ಏರ್ಪಡಿಸಿದೆ.
ಪಿಯು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ಪಿಯುಸಿ ವಿದ್ಯಾರ್ಥಿನಿಯೊಬ್ಬರು ಹಾಸ್ಟೆನ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಎಚ್.ಡಿ. ಕೋಟೆ ತಾಲೂಕು ಬೋಜೇಗೌಡನಹುಂಡಿ ನಿವಾಸಿ ಪವಿತ್ರಾ (18) ಆತ್ಮಹತ್ಯೆ ಮಾಡಿಕೊಂಡವರು. ಇವರು ಸಂತ ಫಿಲೋಮಿನಾ ಪಿಯು ಕಾಲೇಜಿನಲ್ಲಿ ಓದುತ್ತಿದ್ದು, ಸುಭಾಷ್‌ನಗರದಲ್ಲಿರುವ ಹಾಸ್ಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಎನ್.ಆರ್. ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಸ್ ಹರಿದು ಮಗು ಸಾವು
ಕೆಎಸ್‌ಆರ್‌ಟಿಸಿ ಬಸ್ ಹರಿದು ಎರಡು ವರ್ಷದ ಮಗು ಮೃತಪಟ್ಟಿರುವ ಘಟನೆ ಎಚ್.ಡಿ. ಕೋಟೆ ರಸ್ತೆಯಲ್ಲಿರುವ ನಾಚನಹಳ್ಳಿಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿದೆ. ವ್ಯಕ್ತಿಯೊಬ್ಬರು ಮಗುವನ್ನು ಹಿಂಬದಿ ಕೂರಿಸಿಕೊಂಡು ಬೈಕಿನಲ್ಲಿ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಬ್ರೇಕ್ ಹಿಡಿದಾಗ ಬೈಕಿನಲ್ಲಿ ಹಿಂಬದಿ ಕುಳಿತ್ತಿದ್ದ ಮಗು ಕೆಳಗೆ ಬಿದ್ದಿದ್ದು, ಹಿಂದಿನಿಂದ ಬಂದ ಸಾರಿಗೆ ಬಸ್ಸು ಮಗು ಮೇಲೆ ಹರಿದಿದೆ. ಮೃತ ಮಗುವಿನ ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ. ಇದರಿಂದ ರೊಚ್ಚಿಗೆದ್ದ ಮಗುವಿನ ಸಂಬಂಧಿಕರು ಹಾಗೂ ನಿವಾಸಿಗಳು ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಇದರಿಂದಾಗಿ ಎಚ್.ಡಿ. ಕೋಟೆ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ನಗರ ಸಂಚಾರ ಉಪ ವಿಭಾಗದ ಎಸಿಪಿ ಎನ್. ವಿಷ್ಣುವರ್ಧನ್, ಕೆ.ಆರ್. ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್‌ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕೆ.ಆರ್. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.