ಪುರಾತನ ಶಾಸನಗಳ ನಿರ್ಲಕ್ಷ್ಯ ಸಲ್ಲ: ಶಿವಪ್ಪ ವಿಷಾದ (ಸುದ್ದಿ ಸಂಕ್ಷೇಪ )
ಕೋಲಾರ: ವಿದೇಶಿಯರಾದ ಬಿ.ಎಲ್.ರೈಸ್ ಜಿಲ್ಲೆಯ ಐದೂ ತಾಲೂಕುಗಳ ಶಾಸನಗಳನ್ನು ಪರಿಚಯಿಸಿರುವುದು ಪರಂಪರೆಗೆ ಕೊಟ್ಟ ದೊಡ್ಡ ಕೊಡುಗೆ ನೀಡಿದ್ದಾರೆ. ಕೆಲವು ಶಾಸನಗಳನ್ನು ಅವರು ನಮಗಾಗಿ ಬಿಟ್ಟು ಹೋಗಿದ್ದಾರೆ. ಆದರೆ, ಅವುಗಳನ್ನು ನಮ್ಮವರು ಕಾಪಾಡದೇ ನಿರಾಸಕ್ತಿ ತೋರಿರುವುದು ಪರಂಪರೆಯ ಸಂರಕ್ಷಣೆಗೆ ತೊಡಕಾಗಿದೆ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ. ಶಿವಪ್ಪ ವಿಷಾದಿಸಿದರು. ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಇತ್ತೀಚೆಗೆ ಕಾಲೇಜಿನ ಪರಂಪರೆ ಕೂಟದಿಂದ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲೆ-ನಮ್ಮ ಅರಿವು ಕಾರ್ಯಕ್ರಮದಲ್ಲಿ ಶಾಸನಗಳ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿನ ಅನೇಕ ದೇವಾಲಯಗಳನ್ನು ರಾಜಮನೆತನಗಳು ಜೀರ್ಣೋದ್ಧಾರ ಮಾಡಿವೆ. ಹಿಂದೂ ದೇವಾಲಯಗಳ ಜೊತೆ ಬೌದ್ಧ, ಜೈನ ದೇವಾಲಯಗಳಿದ್ದವು ಎಂಬುದಕ್ಕೆ ದಾಖಲೆಗಳಿವೆ, ಎಲ್ಲಾ ಧರ್ಮಗಳಿಗೂ ಜಿಲ್ಲೆಯಲ್ಲಿ ಸ್ಥಾನಮಾನ ಸಿಕ್ಕಿತ್ತು ಎಂಬುದಕ್ಕೆ ಅನೇಕ ಪುರಾವೆಗಳಿದ್ದು, ಮೈಸೂರಿನ ಹುಲಿ ಟಿಪ್ಪುಸುಲ್ತಾನ್ ಸಹ ತನ್ನದೇ ಕೊಡುಗೆ ನೀಡಿರುವುದಕ್ಕೆ ಇಲ್ಲಿರುವ ಸ್ಮಾರಕಗಳು ಸಾಕ್ಷಿ ಎಂದರು. ವಿದ್ಯಾರ್ಥಿಗಳು ಪರಂಪರೆಯನ್ನು ಸಂರಕ್ಷಣೆ ಮಾಡುವುದಕ್ಕೆ ಆಸಕ್ತಿ ತೋರಬೇಕು, ಇದಕ್ಕಾಗಿ ಹೆಚ್ಚಿನ ಆಧ್ಯಯನ ಮುಖ್ಯ, ಬಿಡುವಿನ ವೇಳೆಯಲ್ಲಿ ಜಿಲ್ಲೆಯ ವಿವಿಧ ಕಡೆಗಳಿಗೆ ಪ್ರವಾಸ ಮಾಡಿದಾಗ ಜಿಲ್ಲೆಯ ಚರಿತ್ರೆ, ಪರಂಪರೆ ಅರಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.