ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಚೆ ಮೂಲಕ ಸೋಲಾರ್ ಬೆಳಕು

Rashmi Kasaragodu
Updated On : 13 Feb 2013, 12:11 pm

ಕೋಲಾರ: ಅಂಚೆ ಸೇವೆ ನೀಡುವ ಮೂಲಕ ಜನತೆಯ ವಿಶ್ವಾಸ ಗಳಿಸಿರುವ ಅಂಚೆ ಇಲಾಖೆ ಈಗ ಅನುಷ್ಠಾನದಲ್ಲಿರುವ ಯೋಜನೆಗಳ ಜತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸೋಲಾರ್ ದೀಪಗಳ ಮಾರಾಟಕ್ಕೆ ಮುಂದಾಗಿದೆ.
ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಸಹ ಸಂಕಷ್ಟಕ್ಕೆ ಗುರಿಯಾಗಿರುವುದನ್ನು ಅರಿತ ಅಂಚೆ ಇಲಾಖೆ ಕೈಗೆಟಕುವ ದರದಲ್ಲಿ ಸೋಲಾರ್ ದೀಪಗಳ ಮಾರಾಟಕ್ಕೆ ಮುಂದಾಗಿರುವುದು ನಾಗರಿಕರಿಗೆ ಕೊಂಚ ಮಟ್ಟಿಗೆ ಸಮಾಧಾನ ತಂದಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಹಿರಿಯ ಅಧೀಕ್ಷಕ ಹೆಚ್.ಆರ್. ವೀರಣ್ಣಗೌಡ್ ಅವರು ಸೋಲಾರ್ ದೀಪಗಳ ಬಗ್ಗೆ ತಮ್ಮ ಕಚೇರಿಗೆ ಬರುವ ಅಂಚೆ ಗ್ರಾಹಕರಿಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ.
ಈಗಾಗಲೇ ವಿಮಾ, ದೂರವಾಣಿ, ವಿದ್ಯುತ್ ಬಿಲ್ ಪಾವತಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ನೀಡಿಕೆಯಂತಹ ಮಹತ್ತರ ಕಾರ್ಯಗಳಿಗೂ ಮುಂದಾಗಿದ್ದು, ಈಗ ಜಿಲ್ಲೆಯ ಮಕ್ಕಳ ವಿದ್ಯುತ್ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸೋಲಾರ್ ದೀಪಗಳ ಬಗ್ಗೆ ಪ್ರಚಾರ ಹಾಗೂ ಮಾರಾಟಕ್ಕೆ ಮುಂದಾಗಿದ್ದಾರೆ.
ಡಿ.ಲೈಟ್ ಕಂಪನಿಯ 549 ಮುಖಬೆಲೆಯ ಡಿಲೈಟ್ ಕಿರಣ್ ಎಸ್ 20 ಹೆಸರಿನ ಸೌರಶಕ್ತಿ ಲಾಟಿನ್ ಹಾಗೂ ಡಿ.ಲೈಟ್ ನೋವಾ ಎಸ್-300 ಎಂಬ ಮೊಬೈಲ್ ಚಾರ್ಜಿಂಗ್ ಲೈಟ್‌ಗೆ 1699 ಬೆಲೆಯ ಸೋಲಾರ್ ದೀಪಗಳನ್ನು ನಾಗರಿಕರಿಗೆ ಒದಗಿಸಲು ಇಲಾಖೆಯಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲೆಯ ತನ್ನ 65 ಉಪ ಅಂಚೆ ಕಚೇರಿಗಳಲ್ಲಿ ಹಾಗೂ 357 ಗ್ರಾಮೀಣ ಅಂಚೆ ಕಚೇರಿಗಳಲ್ಲಿ ಈ ಸೋಲಾರ್ ದೀಪವನ್ನು ಖರೀದಿ ಮಾಡಬಹುದಾಗಿದ್ದು ನಾಗರಿಕರು ಅಗತ್ಯಕ್ಕೆ ಅನುಗುಣವಾಗಿ ಲಿಖಿತ ಪತ್ರ ನೀಡಿದಲ್ಲಿ ಅವರು ಕೇಳಿದ ಸೋಲಾರ್ ಸಾಧನವನ್ನು ತರಿಸಿಕೊಡಲಾಗುತ್ತದೆ ಎಂದು ವೀರಣ್ಣಗೌಡ್ ತಿಳಿಸಿದ್ದಾರೆ.
8ಗಂಟೆ ಚಾರ್ಜ್, 8ಗಂಟೆ ಬೆಳಕು: ವಿದ್ಯಾರ್ಥಿಗಳಿಗಾಗಿಯೇ ವಿಶಿಷ್ಟ ರೀತಿಯಲ್ಲಿ ವಿನ್ಯಾಸಗೊಳಿಸಿರುವ ಸೋಲಾರ್ ಲಾಟಿನ್ ಅನ್ನು ಹಳೆ ಕಾಲದ ಲಾಟಿನ್ ಮಾದರಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ. 8 ಗಂಟೆ ಬಿಸಿಲಲ್ಲಿ ಚಾರ್ಜ್ ಆದರೆ ಈ ಲಾಟಿನ್ ನಂತರ 8 ಗಂಟೆಗಳ ಕಾಲ ಬೆಳಕು ನೀಡಲಿದೆ.
ಜಿಲ್ಲೆಯಲ್ಲಿ ಈಗಾಗಲೇ 170 ಸೋಲಾರ್ ದೀಪಗಳು ಮಾರಾಟವಾಗಿವೆ. ಜನತೆಯ ಬೇಡಿಕೆಯ ಹಿನ್ನೆಲೆಯಲ್ಲಿ ಮತ್ತೆ ಒಂದು ಸಾವಿರ ಸೋಲಾರ್ ದೀಪಗಳನ್ನು ತರಿಸಿಕೊಳ್ಳಲಾಗುತ್ತಿದ್ದು ಅಂಚೆ ಇಲಾಖೆಯ ಈ ಹೊಸ ಯೋಜನೆ ವಿದ್ಯುತ್ ಸಮಸ್ಯೆಯಿಂದ ಕಂಗಾಲಾಗಿರುವ ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುವುದರಲ್ಲಿ ಅನುಮಾನವಿಲ್ಲ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement