ನಾಡ ಕಚೇರಿಯಲ್ಲಿ ಕಾಣದ ನೆಮ್ಮದಿ
ಬಂಗಾರಪೇಟೆ: ಸಾರ್ವಜನಿಕರಿಗೆ ನೆರವಾಗಲೆಂದು ಆರಂಭಿಸಿದ್ದ ನೆಮ್ಮದಿ ಕೇಂದ್ರಗಳನ್ನು ಮುಚ್ಚಿ ನಾಡ ಕಚೇರಿಗಳನ್ನು ತರೆದರೂ ಯಾವುದೇ ರೀತಿಯಲ್ಲಿ ಅನುಕೂಲವಾಗಿಲ್ಲ. ಬದಲಾಗಿ ತೊಂದರೆಗಳೇ ಅಧಿಕವಾಗಿದ್ದು, ಕೂಡಲೆ ಅವ್ಯವಸ್ಥೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿ ದಲಿತ ಸಿಂಹ ಸೇನೆ ಮುಖಂಡರು ನಾಡ ಕಚೇರಿ ಮುಂದೆ ಧರಣಿ ಮಾಡಿದರು.
ಈ ಹಿಂದೆ ನೆಮ್ಮದಿ ಕೇಂದ್ರಗಳ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ ಪತ್ರ ಸೇರಿದಂತೆ ಇತರೇ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿತ್ತು. ಆದರೆ ಜನವರಿ 31ರಿಂದ ನೆಮ್ಮದಿ ಕೇಂದ್ರಗಳನ್ನು ಮುಚ್ಚಿ ಸಾರ್ವಜನಿಕರಿಗೆ ತ್ವರಿತವಾಗಿ ಸೇವೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ಸೇವೆಗಳನ್ನು ನಾಡ ಕಚೇರಿಗಳಲ್ಲಿ ಪ್ರಾರಂಭಿಸಲಾಗಿದೆ.
ಆದರೆ ನಾಡ ಕಚೇರಿಗಳು ಎಲ್ಲಿವೆ ಎಂಬುದೇ ಬಹುತೇಕ ಜನರಿಗೆ ತಿಳಿದಿಲ್ಲ. ಈಗಲೂ ನೆಮ್ಮದಿ ಕೇಂದ್ರ ಇದ್ದ ಕಡೆಯೇ ಜನರು ಹೋಗಿ ವಾಪಸ್ ಬರುವಂತಾಗಿದೆ. ಅಲ್ಲದೆ ನಾಡಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಸೇವೆಗಳು ನೆಮ್ಮದಿ ಕೇಂದ್ರಗಳಿಗಿಂತಲೂ ವಿಳಂಬವಾಗುತ್ತಿವೆ ಎಂದು ಆರೋಪಿಸಿದರು.
ಇಲ್ಲಿರುವ ಸಿಬ್ಬಂದಿ ಸಹ ಸಾರ್ವಜನಿಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳದೆ ಬೇಜವಾಬ್ದಾರಿಯಿಂದ ನಡೆದು ಕೊಳ್ಳುವುದರಿಂದ ಪ್ರತಿದಿನ ವಿದ್ಯಾರ್ಥಿಗಳು, ವೃದ್ಧರು ಮತ್ತಿತರರು ಬೆಳಗ್ಗೆಯಿಂದ ಸಂಜೆವರೆಗೂ ಕಾಯುವಂತಾಗಿದೆ. ಆದ್ದರಿಂದ ಮೊದಲು ನಾಡ ಕಚೇರಿ ಎಲ್ಲಿದೆ ಎಂಬುದರ ಬಗ್ಗೆ ಸೂಕ್ತವಾಗಿ ಪ್ರಚಾರ ಮಾಡಿ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಮತ್ತು ಹೆಚ್ಚಿನ ಸಿಬ್ಬಂದಿಯನ್ನು ಆಯೋಜಿಸಿ ತ್ವರಿತವಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುವಂತೆ ಮುಂದಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್, ಹುಣನಸನಹಳ್ಳಿ ರಮೇಶ್, ಕುಮ್ಮಿ, ವೇಣುಗೌಡ, ಪಿಳ್ಳಪ್ಪ, ಅಯ್ಯಪ್ಪ, ವೆಂಕಟೇಶ್ ಮತ್ತಿತರರು ಇದ್ದರು.