ನೀರಿಗಾಗಿ ನೀರೆಯರ ಒತ್ತಾಯ
ಬಂಗಾರಪೇಟೆ: ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಲ್ಲಿ ಪುರಸಭೆ ಅಧಿಕಾರಿಗಳು ಎಡವಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಮುಖ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಪಟ್ಟಣದ 19ನೇ ವಾರ್ಡಿನಲ್ಲಿ ಕಳೆದೆ 15ದಿನಗಳಿಂದ ಕುಡಿಯುವ ನೀರು ಪೂರೈಸದೆ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ವಾರ್ಡಿನಲ್ಲಿ ನೀರಿಲ್ಲದೆ ಹತ್ತಾರು ಸಮಸ್ಯೆ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಸ ಸಂಗ್ರಹಿಸುವ ಸ್ತ್ರೀಶಕ್ತಿ ಗುಂಪಿನ ಮಹಿಳೆಯರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಹಲವು ರೋಗಗಳು ಹರಡುವಂತಾಗಿದೆ. ಬೀದಿ ದೀಪಗಳಿಲ್ಲ ಚರಂಡಿಗಳ ವ್ಯವಸ್ಥೆ ಸರಿಯಾಗಿಲ್ಲ ಕೊಚ್ಚೆ ನೀರು ಸರಾಗವಾಗಿ ಹರಿಯದೆ ರಸ್ತೆಗಳ ಮೇಲೆ ಹರಿಯುವುದು ಎಂದು ಕಿಡಿಕಾರಿದರು.
ಸಮಸ್ಯೆ ಬಗೆಹರಿಸುವವರೆಗೂ ಸ್ಥಳ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಮುಖ್ಯಾಧಿಕಾರಿ, ಪರಿಸರ ಅಧಿಕಾರಿ, ಆರೋಗ್ಯ ಅಧಿಕಾರಿ ಮತ್ತು ನೀರು ಬಿಡುವ ಸಿಬ್ಬಂದಿಯೊಂದಿಗೆ ವಾರ್ಡಿಗೆ ತೆರಳಿ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ, ತಕ್ಷಣ ನೀಗಿಸುವುದಾಗಿ ಭರವಸೆ ನೀಡಿದರು.