ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರೇಮಿಗಳ ತಪೋಭಂಗದುಷ್ಕರ್ಮಿಗಳಿಗೆ ಧರ್ಮದೇಟು

Rashmi Kasaragodu
Updated On : 13 Feb 2013, 12:11 pm

ಚಿಂತಾಮಣಿ: ಪ್ರೇಮಿಗಳಿಬ್ಬರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಅವರ ಬಳಿ ಇದ್ದ ಬಂಗಾರದ ಒಡವೆ ಹಾಗೂ ಸಾವಿರಾರು ರುಪಾಯಿ ನಗದು ಹಣ ದೋಚಿ ಅತ್ಯಾಚಾರ ಮಾಡಲು ಯತ್ನಿಸಿದ ದುಷ್ಕರ್ಮಿ ಯುವಕರ ಗುಂಪನ್ನು ಗ್ರಾಮಸ್ಥರು ಹಿಮ್ಮೆಟ್ಟಿಸಿ ಹಿಡಿದು ಮರಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಕೈವಾರ ತಪೋಭವನ ಬಳಿ ಇಂದು ನಡೆದಿದೆ.
ಘಟನೆ ವಿವರ...: ಮೂಲತಃ ಬೆಂಗಳೂರಿನವರಾದ ಪ್ರಭು ಮತ್ತು ಶಬನಂ ಎಂಬ ಇಬ್ಬರು ಪ್ರೇಮಿಗಳು ಸೇರಿ ತಾಲೂಕಿನ ಶ್ರೀ ಯೋಗಿನಾರಾಯಣ ಯತೀಂದ್ರರ ತಪೋಭವನಕ್ಕೆ ಮಂಗಳವಾರ ಮಧ್ಯಾಹ್ನ ಗೇಟ್ ಪಾಸ್ ಪಡೆದು ಒಳಗಡೆ ಹೋಗಿ ಉದ್ಯಾನವನದಲ್ಲಿರುವ ಪಕ್ಷಿ ಹಾಗೂ ಪ್ರಾಣಿಗಳನ್ನು ವೀಕ್ಷಿಸಿದ್ದಾರೆ. ನಂತರ  ಪ್ರೇಮಿಗಳು ವಿಶಾಲ ನಿರ್ಜನ ಪ್ರದೇಶದಲ್ಲಿ ಕುಳಿತುಕೊಂಡು ಪರಸ್ಪರ ಮಾತನಾಡುತ್ತಿರುವಾಗ ಆಂಧ್ರಪ್ರದೇಶದ ಪಲಮನೇರ್ ನಿವಾಸಿ ಸಂದಿಲ್, ಟಿಪ್ಪು ನಗರದ ರೆಹಮಾನ್, ಶ್ರೀನಿವಾಸಪುರ ಗ್ರಾಮದ ಶ್ರೀಧರ್ ಮತ್ತು ಸಿದ್ದಿಕ್ ಎಂಬ ನಾಲ್ವರು ಪ್ರೇಮಿಗಳನ್ನು ಹಿಂಬಾಲಿಸಿ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ.
ಯುವತಿ ಕತ್ತಿನಲ್ಲಿದ್ದ ಚಿನ್ನದ ಚೈನು ಹಾಗೂ ಪ್ರಭು ಬಳಿ ಇದ್ದ 8 ಸಾವಿರ ನಗದು, ಮೊಬೈಲ್, ವಾಚ್ ಕಿತ್ತುಕೊಂಡಿದ್ದಾರೆ. ನಂತರ ಯುವತಿಯನ್ನು ಬಲತ್ಕಾರ ಮಾಡಲು ಯತ್ನಿಸಿದಾಗ ಇಬ್ಬರು ವಿರೋಧ ವ್ಯಕ್ತಪಡಿಸಿ ಜೋರಾಗಿ ಕಿರುಚಿದ್ದಾರೆ. ಕಿರುಚಾಟ ಕೇಳಿದ ತಪೋಭವನ ಪಕ್ಕದಲ್ಲಿದ್ದ ರೈತರು ಹಾಗೂ ನೆರೆಹೊರೆಯ ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಧಾವಿಸಿ ನಾಲ್ವರು ದುಷ್ಕರ್ಮಿಗಳನ್ನು ಹಿಡಿಯಲು ಯತ್ನಿಸಿದಾಗ ಇಬ್ಬರು ಮಾಲು ಸಮೇತ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಕೈಗೆ ಸಿಕ್ಕ ರೆಹಮಾನ್ ಮತ್ತು ಸಂದಿಲ್ ಎಂಬವರನ್ನು ಹಿಡಿದ ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಗ್ರಾಮಸ್ಥರ ಆರೋಪ: ತಾಲೂಕಿನ ಯಾತ್ರಾ ಸ್ಥಳವಾದ ಕೈವಾರ ಸುತ್ತಮುತ್ತಲಿನ ವನವಿಹಾರ ಹಾಗೂ ಯಾತ್ರಾಸ್ಥಳಗಳಿಗೆ ಪರಸ್ಥಳಗಳಿಂದ ಬರುವ ಅಪರಿಚಿತ ಯುವಕ ಯುವತಿಯರಿಂದ ಯಾವುದೇ ಗುರುತಿನ ಚೀಟಿ ಪರೀಕ್ಷಿಸುವುದಿಲ್ಲ. ಅಲ್ಲದೆ ಪರಿಚಯವಿಲ್ಲದ ವ್ಯಕ್ತಿಗಳಿಗೆ ಪ್ರವೇಶ ಹಾಗೂ ವಸತಿಗೃಹಗಳಲ್ಲಿ ವಸತಿ ಪಡೆಯುವ ವ್ಯಕ್ತಿಗಳ ಬಗ್ಗೆನಿಖರವಾದ ಮಾಹಿತಿ ಪಡೆಯದೆ ನೀಡುವುದರಿಂದ ಈ ಪ್ರದೇಶದ ಸುತ್ತಮುತ್ತಲೂ ಹಲವಾರು ಪ್ರೇಮಿಗಳು ಅನೈತಿಕ ಚಟುವಟಿಕೆ ನಡೆಸುತ್ತಾರೆ. ಇದನ್ನು ತಡೆಯುವಲ್ಲಿ ಸ್ಥಳೀಯ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಪೊಲೀಸರು ವಿಫಲಗೊಂಡಿರುವುದಾಗಿ ನೂರಾರು ಗ್ರಾಮಸ್ಥರು ಆರೋಪಿಸಿದ್ದಾರೆ.
ತಡವಾಗಿ ಬಂದ ಪೋಲೀಸರು: ಹಣ, ಒಡವೆ ದೋಚಿ ಮಾಲು ಸಮೇತ ಪರಾರಿಯಾದ ಇಬ್ಬರ ಬಗ್ಗೆ ಮಾಹಿತಿ ಪಡೆಯಲು ಸಿಕ್ಕಿಬಿದ್ದ ಇಬ್ಬರನ್ನು ಗ್ರಾಮಸ್ಥರೇ ಸೇರಿ ಮರವೊಂದಕ್ಕೆ ಕಟ್ಟಿಹಾಕಿ ಗಂಟೆಗೂ ಹೆಚ್ಚು ಕಾಲ ಗೂಸ ನೀಡಿ ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ.ನಂತರ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ತಿಳಿಸಿದರು. ತಡವಾಗಿ ಬಂದ ಪೊಲೀಸರು ಯುವಕರ ಬಳಿ ಇದ್ದ ಎರಡೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರು. ಬಳಿಕ ಪರಾರಿಯಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement