'ವರ್ಷಗಟ್ಟಲೆ ಬೇರು ಬಿಟ್ಟವರನ್ನು ವರ್ಗಾವಣೆ ಮಾಡಿ'
ಚಿಕ್ಕಬಳ್ಳಾಪುರ: ಜಿಲ್ಲಾ ಖಜಾನೆ ಇಲಾಖೆಯ ಕಚೇರಿಗೆ ಬರುವ ರೈತರೊಂದಿಗೆ ಸೌಜನ್ಯ ಇಲ್ಲದೇ ಮಾತನಾಡಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳೆದ ಅನೇಕ ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿರುವವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.
ಖಜಾನೆ ಕಚೇರಿಗೆ ತೆರಳಿ ಖಜಾನೆ ಅಧಿಕಾರಿ ಸುಮಾ ಅವರಿಗೆ ಮನವಿ ಪತ್ರ ಸಲ್ಲಿಸಿದ ಮುಖಂಡರು, ಕಚೇರಿಯಲ್ಲಿ ಕೆಲ ಸಿಬ್ಬಂದಿಗಳು ಅನಗತ್ಯ ವಿಳಂಬ ನೀತಿಯನ್ನು ಅನುಸರಿಸುತ್ತ ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ರೈತರ ಕಡತಗಳಿಗೆ ಸಣ್ಣ ಪುಟ್ಟ ವಿಷಯಗಳಿಗೂ ಆಕ್ಷೇಪ ವ್ಯಕ್ತಪಡಿಸಿ, ತೊಂದರೆ ಕೊಡುತ್ತಿದ್ದಾರೆ. ಬೇಕಂತಲೇ ಒಂದೇ ಕಡತವನ್ನು 2-3 ಬಾರಿ ತಿದ್ದುಪಡಿಗೆ ಕಳುಹಿಸಿಕೊಡುತ್ತಾರೆ ಎಂದು ಆರೋಪಿಸಿದರು.
ರೈತರ ಕಡತವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಖಜಾನೆ ಅಧಿಕಾರಿಗಳ ಸೂಚನೆಯ ಮೇರೆಗೆ ಕಡತದ ಸ್ಥಿತಿಗತಿಗಳ ಬಗ್ಗೆ ತಿಳಿದು ಕೊಳ್ಳಲು ಶಂಕರರೆಡ್ಡಿ ಎಂಬ ನೌಕರರ ಬಳಿ ವಿಚಾರಿಸಲು ಹೋದಾಗ ಅವರು ಸೌಜನ್ಯರಹಿತವಾಗಿ ಮಾತನಾಡಿ, ಒಳಗಡೆ ಬಂದುದ್ದೇಕೆ ಎಂದು ರೈತ ಪ್ರತಿನಿಧಿಗಳ ಜತೆ ವಾಗ್ವಾದಕ್ಕಿಳಿದು ದುರ್ವರ್ತನೆಯಿಂದ ನಡೆದುಕೊಂಡರು. ಇವರು ಕಚೇರಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಬೇರೆಡೆಗೆ ವರ್ಗಾವಣೆ ಮಾಡಬೇಕು. ಅದೇ ರೀತಿ ತಾಲೂಕು ಮಟ್ಟದ ಮಹಿಳಾ ಖಜಾನೆ ಅಧಿಕಾರಿಯೊಬ್ಬರು ಸಹ ಉದ್ಧಟತನದಿಂದ ವರ್ತಿಸಿದ್ದು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಕಚೇರಿಗೆ ಬರುವ ರೈತರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಒಕ್ಕಲಿಗ ಸಂಘದ ನಿರ್ದೇಶಕ ಶ್ರೀನಿವಾಸ್, ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಭಾರತೀಯ ಕಿಸಾನ್ ಸಂಘದ ದಕ್ಷಿಣಾ ಪ್ರಾಂತ್ಯ ಉಪಾಧ್ಯಕ್ಷ ಕೃಷ್ಣಪ್ಪ, ಜಿಲ್ಲಾಧ್ಯಕ್ಷ ವಿ.ಕೃಷ್ಣಪ್ಪ, ನಾರಾಯಣಸ್ವಾಮಿ, ಕರುನಾಡ ಸೇನೆಯ ಉಪಾಧ್ಯಕ್ಷ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಶ್ರೀರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.