ವಿದ್ಯಾರ್ಥಿ ವಿಷ ಸೇವನೆಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದಾಟ
ಚಿಕ್ಕಬಳ್ಳಾಪುರ: ಅಮ್ಮ ಬೈದಳೆಂದು ಮನನೊಂದು ವಿಷ ಸೇವಿಸಿದ ವಿದ್ಯಾರ್ಥಿಯೊಬ್ಬನಿಗೆ ಚಿಕಿತ್ಸೆ ಕೊಡಿಸುವಲ್ಲಿ ಪೋಷಕರು ಪರದಾಡಿದ ಘಟನೆ ಮಂಗಳವಾರ ನಡೆಯಿತು. ಆತಂಕದಿಂದ ಅಸ್ವಸ್ಥನಾಗಿದ್ದವನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಮುಷ್ಕರ ಕಾರಣ ಅಲ್ಲಿ ಚಿಕಿತ್ಸೆ ದೊರೆಯದೇ ರೋಗಿಗಳಿಂದ ತುಂಬಿ ತುಳುಕಾಡುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಹೋಗುವಷ್ಟರಲ್ಲಿ ಅವರ ಜೀವ ಕೈಗೆ ಬಂದಿತ್ತು.
ತಾಲೂಕಿನ ಅಣಕನೂರು ಗ್ರಾಮದ ಶಶಿಕುಮಾರ್ (12) ಕ್ಷುಲ್ಲಕ ಕಾರಣಕ್ಕೆ ವಿಷ ಸೇವಿಸಿದ್ದಾನೆ. ಏನೋ ಕೋಪದಲ್ಲಿರುವ ಅವನ ತಾಯಿ ಬೈದಿದ್ದಾರೆ. ಅವನ ಕೀಟಲೆಯ ಕೆಲಸಕ್ಕೆ ರೋಸಿ ಹೋಗಿ ಇನ್ನೊಮ್ಮೆ ಆ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಶಶಿಕುಮಾರ್ ತನ್ನ ತಾಯಿ ಬೈದಳೆಂದು ಮನನೊಂದು ವಿಷ ಸೇವಿಸಿ ಒದ್ದಾಡುತ್ತಿದ್ದ. ಇದನ್ನು ಕಂಡ ಅವನ ಪೋಷಕರು ತಕ್ಷಣ ಗ್ರಾಮದಿಂದ ಜಿಲ್ಲಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಅವರಿಗೆ ಮೊದಲಿಗೆ ನೆನಪಾಗಿದ್ದು ಜಿಲ್ಲಾ ಸರ್ಕಾರಿ ಆಸ್ಪತ್ರೆ. ಆದರೆ, ಆಸ್ಪತ್ರೆಗೆ ಹೋಗಿ ನೋಡಿದರೆ, ಅಲ್ಲಿ ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಚಿಕಿತ್ಸೆ ಸಿಗುವುದಿಲ್ಲ. ಬೇರೆ ಕಡೆ ಹೋಗಿ ಎಂಬ ಉತ್ತರ ಸಿಕ್ಕಿದೆ. ಇದರಿಂದ ಜೀವನ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದಂತೆ, ಆಗಾಗಲೇ ತಾಲೂಕಿನ ಚೊಕ್ಕಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ರಾಜಹಂಸ ಬಸ್, ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಗಾಯಗೊಂಡ 15 ಮಂದಿಗೆ ಚಿಕಿತ್ಸೆ ಕೊಡುವ ಒತ್ತಡದಲ್ಲಿರುವುದು ತಿಳಿದು ಬಂದಿದೆ. ಆಗ ಅನಿವಾರ್ಯವಾಗಿ ಸಮೀಪದ ಮಾನಸ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಯಿತು. ಅಷ್ಟೊತ್ತಿಗಾಗಲೇ ವಿಷ ಸೇವಿಸಿದ ತನ್ನ ಮಗನಿಗೆ ಏನಾಗುತ್ತದೆಯೋ ಎಂಬ ಭಯದಲ್ಲಿದ್ದ ತಾಯಿಯ ಪರಿಸ್ಥಿತಿ ಹೇಳತೀರದಾಗಿತ್ತು.
ರೂಪ ಆತ್ಮಹತ್ಯೆ ಯತ್ನ: ಗೋಮನಕೆರೆಹಳ್ಳಿಯ ರೂಪ ಎಂಬಾಕೆ ಕ್ಷುಲ್ಲಕ ಕಾರಣಕ್ಕಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಇವರ ಪೋಷಕರ ಪರಿಸ್ಥಿತಿಯೂ ಒಂದೇ ಆಗಿತ್ತು. ಆಕೆಗೆ ಮಂಜುನಾಥ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಯಿತು.
ಮುಷ್ಕರ ಹಿಂದಕ್ಕೆ: ತುಸು ನೆಮ್ಮದಿ
ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರೆ ನೀಡಿದ್ದ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದು ಸಾರ್ವಜನಿಕರಲ್ಲಿ ತುಸು ನೆಮ್ಮದಿಯನ್ನು ತಂದಿದೆ. ಸಂಘದ ಕರೆಯಂತೆ ವೈದ್ಯರು ಮತ್ತು ಸಿಬ್ಬಂದಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ಬಂದು ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಮಂಗಳವಾರ ಬೆಳಗ್ಗೆ ವೈದ್ಯರ ಸಂಘ ತಮ್ಮ ನಿರ್ಧಾರವನ್ನು ಹೊರ ಹಾಕಿದ್ದು ಬಹಳಷ್ಟು ಜನರಿಗೆ ತಿಳಿಯದೇ ಇದ್ದ ಹಿನ್ನೆಲೆಯಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬಾರದಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಮತ್ತೊಂದೆಡೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳು ಮತ್ತು ಅವರ ಪೋಷಕರಲ್ಲಿನ ಆತಂಕ ದೂರವಾಗಿದ್ದು ಚಿಕಿತ್ಸೆಗಾಗಿ ಅವರು ಎದುರು ನೋಡುತ್ತಿದ್ದಾರೆ. ಒಟ್ಟಾರೆ, ಸರ್ಕಾರ ಮತ್ತು ಸರ್ಕಾರಿ ವೈದ್ಯರು, ಸಿಬ್ಬಂದಿ ಮುಷ್ಕರದ ತಿಕ್ಕಾಟವು ಅಕ್ಷರಶಃ ಜನರನ್ನು ಹಿಂಡಿ ಹಿಪ್ಪೆ ಮಾಡಿದಂತೂ ಸುಳ್ಳಲ್ಲ.