ಹಳ್ಳಿಗಳಿಂದ ಪಟ್ಟಣಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಿ
ಶಿಡ್ಲಘಟ್ಟ: ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರಿಗೆ ಅನುಕೂಲ ಕಲ್ಪಿಸಲು ಸಾರಿಗೆ ಬಸ್ ಡಿಪೋ ನಿರ್ಮಾಣ ಹಾಗೂ ಸಮರ್ಪಕವಾದ ಸಾರಿಗೆ ವ್ಯವಸ್ಥೆಗೆ ಒತ್ತಾಯಿಸಿ ಎಸ್‌ಎಫ್‌ಐ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಚಿಂತಾಮಣಿ-ಚಿಕ್ಕಬಳ್ಳಾಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರು ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಶಾಲಾ ಕಾಲೇಜುಗಳಿಗೆ ಬರುವಂತಹ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಸಾರಿಗೆಯ ವ್ಯವಸ್ಥೆಯಿಲ್ಲದೇ ಪರದಾಡುವಂತಾಗಿದೆ. ಸಾರಿಗೆ ಅವ್ಯವಸ್ಥೆಯಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಬರುವಂತಹ ಸಾರ್ವಜನಿಕರು ಕೂಡ ಸಾರಿಗೆಯ ವ್ಯವಸ್ಥೆಯಿಲ್ಲದೇ ಆಟೋಗಳಿಗೆ ಮೊರೆ ಹೋಗಿ ದುಬಾರಿ ಹಣದ ಹೊರೆಯನ್ನು ಹೊರುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ದಿಬ್ಬೂರಹಳ್ಳಿಯಿಂದ ಶಿಡ್ಲಘಟ್ಟಕ್ಕೆ ಶಾಲಾ ಕಾಲೇಜುಗಳ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಸಾರಿಗೆಯ ಅಧಿಕಾರಿಗಳು ನೀಡಿದ್ದ ಭರವಸೆಗಳು ಸುಳ್ಳಾಗಿವೆ. ಪಟ್ಟಣದಿಂದ ಮೂರು ಕಿ.ಮೀ ದೂರದಲ್ಲಿರುವ ಐ.ಟಿ.ಐ ಕಾಲೇಜಿಗೆ ಹೋಗಬೇಕಾದ ವಿದ್ಯಾರ್ಥಿಗಳು ಪ್ರತಿನಿತ್ಯ ಆರು ಕಿ.ಮೀ.ಗಳಷ್ಟು ನಡೆಯಬೇಕಾಗಿದೆ. ತಾಲೂಕಿನ ಗಂಜಿಗುಂಟೆ, ಗಂಗಹಳ್ಳಿ, ಕಾಚಹಳ್ಳಿ, ಗಂಗಾಪುರಕ್ಕೆ ಕುಂದಲಗುರ್ಕಿ ಮಾರ್ಗವಾಗಿ ಶಿಡ್ಲಘಟ್ಟಕ್ಕೆ ಸಾರಿಗೆ ಸೌಲಭ್ಯ ಕಣ್ಮರೆಯಾಗಿದೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ಬಸ್ ಡಿಪೋ ನಿರ್ಮಾಣಕ್ಕಾಗಿ ಭೂಮಿ ಹಸ್ತಾಂತರಿಸಿಲ್ಲ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ, ಭೂಮಿಯನ್ನು ಈಗಾಗಲೇ ಹಸ್ತಾಂತರಿಸಿದ್ದೇವೆ ಎಂದು ತಹಶೀಲ್ದಾರರು ಹೇಳಿದ್ದಾರೆ. ಎರಡೂ ಇಲಾಖೆಯ ಅಧಿಕಾರಿಗಳು ಸೇರಿ ತಾಲೂಕಿನ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕೂಡಲೇ ಪಟ್ಟಣದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಹಸೀಲ್ದಾರ್ ಎಂ.ಕೆ. ರಮೇಶ್ ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದೆಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ತಾಲೂಕು ಸಂಚಾಲಕರಾದ ಸದಾನಂದ, ಫಯಾಜ್, ಮುಖಂಡರಾದ ವೆಂಕಟೇಶ್, ಗಂಗರಾಜು, ಆಂಜಿನಪ್ಪ, ಮುನಿರಾಜು, ವೆಂಕಟೇಶಮೂರ್ತಿ ಮುಂತಾದವರು ಹಾಜರಿದ್ದರು.