ಗುಳ್ಳೇನರಿ ಬುದ್ಧಿ ರಾಜಕಾರಣಿಗಳ ಕಡೆ ಎಚ್ಚರ ವಹಿಸಿ
ಕೋಲಾರ: ಚುನಾವಣೆ ಸಮೀಪಿಸುತ್ತಿರುವುದರಿಂದ ನಿಮ್ಮ ಮನೆ ಬಾಗಿಲಿಗೆ ಓಟು ಕೇಳಲು ಬರುವ ಗುಳ್ಳೇನರಿ ಬುದ್ಧಿಯ ರಾಜಕಾರಣಿಗಳ ಬಗ್ಗೆ ಎಚ್ಚರ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ವರ್ತೂರು ಪ್ರಕಾಶ್ ಗ್ರಾಮೀಣ ಪ್ರದೇಶದ ಮತದಾರರಿಗೆ ಕರೆ ನೀಡಿದ್ದಾರೆ.
ತಾಲೂಕಿನ ಕೋಡಿ ರಾಮಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಸಪಲಮ್ಮ ದೇವಿಯ ನೂತನ ದೇವಾಲಯದಲ್ಲಿ ದೇವರ ವಿಗ್ರಹಗಳ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷದಲ್ಲಿ ಜನರನ್ನು ಕೀಳಾಗಿ ನೋಡಿ ಕಳೆದ ಚುನಾವಣೆಯಲ್ಲಿ ತಿರಸ್ಕಾರಗೊಂಡ ಮಾಜಿ ಸಚಿವ ಶ್ರೀನಿವಾಸಗೌಡರು ಈಗ ಚುನಾವಣಾ ಸಮಯ ಹತ್ತಿರ ಬರುತ್ತಿರುವುದರಿಂದ ಮತಯಾಚನೆಗಾಗಿ ನಿಮ್ಮ ಬಳಿ ಬರುತ್ತಿದ್ದು ಗ್ರಾಮೀಣ ಪ್ರದೇಶದ ಜನತೆ ಯಾವುದೇ ಆಮಿಷಗಳಿಗೆ ಬಲಿಯಾಗದೆ, ಅಭಿವೃದ್ಧಿ ಕೆಲಸಕ್ಕೆ ಮನ್ನಣೆ ನೀಡುವ ಮೂಲಕ ಮಾಜಿ ಸಚಿವರಿಗೆ ಮತ್ತೊಮ್ಮೆ ಬುದ್ಧಿ ಕಲಿಸಬೇಕೆಂದರು.
ನನ್ನ ವಿರುದ್ಧ ಮಾಜಿ ಸಚಿವರು ಹಳೇ ಗ್ರಾಮಫೋನ್ ಹಾಕಿ ಜನತೆ ಬೇಸರಪಡುವಂತೆ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದ ಯುವಕರು ನನಗೂ ಮಕ್ಕಳಿದ್ದಂತೆ, ಅವರನ್ನು ಹಾಳು ಮಾಡುವ ಕೆಟ್ಟ ಕೆಲಸ ನಾನೆಂದಿಗೂ ಮಾಡುವುದಿಲ್ಲ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಣ, ಹೆಂಡ, ಸಾರಾಯಿ ಹಂಚದೆ ಚುನಾವಣೆ ಎದುರಿಸಿದ್ದೇನೆ. ಬಡವರ ಪರ ಸೇವಾ ಕಾರ್ಯಗಳೇ ನನಗೆ ಶ್ರೀ ರಕ್ಷೆಯಾಗಿ ನಿಂತವು ಎಂದು ಸ್ಮರಿಸಿದರು.
ಕೋಡಿರಾಮಸಂದ್ರ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಲ್ಲಿ 12 ಲಕ್ಷ ರು. ಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬೋರ್ವೆಲ್ ಕೊರೆಸಿ ಪಂಪು ಮೋಟಾರು ಅಳವಡಿಸಿ ಸಮಸ್ಯೆ ನೀಗಿಸಲಾಗಿದೆ. ಚರಂಡಿ, ಪ್ರತಿ ಮನೆಗೂ ನಲ್ಲಿ ಅಳವಡಿಕೆ ಕಾರ್ಯ ನಡೆಯಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಬೇತಮಂಗಲ ಮಾರ್ಗದವರೆಗೂ ಡಾಂಬರು ರಸ್ತೆ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದರು.
ಕಳ್ಳಿಪುರ ಹಾಗೂ ಹೊನ್ನೇನಹಳ್ಳಿ ಗ್ರಾಮಗಳಲ್ಲೂ ಮೂಲ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಲಾಗಿದ್ದು, ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ತಮ್ಮನ್ನು ಆಶೀರ್ವದಿಸುವಂತೆ ಸಚಿವರು ಕೋರಿದರು.
ಸಾಬೀರ್ಪಾಷ, ಬೆಗ್ಲಿ ಪ್ರಕಾಶ್, ತಾಪಂ ಸದಸ್ಯ ಕೃಷ್ಣಮೂರ್ತಿ, ರಘುರಾಂ, ಮಧುಸೂದನ್, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್, ಚಿಕ್ಕಹನುಮಪ್ಪ, ತಂಬಿಹಳ್ಳಿ ಮುನಿಯಪ್ಪ ಮತ್ತಿತರರು ಇದ್ದರು.