ಜಮೀನು ಸರ್ವೆ ಮಾಡಿಕೊಡಲು ವೃದ್ಧನನ್ನು ಅಲೆದಾಡಿಸಿದ ಅಧಿಕಾರಿಗೆ ಲೋಕಾ ತರಾಟೆ
ಬಂಗಾರಪೇಟೆ: ವೃದ್ಧರೊಬ್ಬರು ನಾಲ್ಕು ಗುಂಟೆ ಜಮೀನು ಸರ್ವೆಗೆ ನಾಲ್ಕು ಬಾರಿ ಅರ್ಜಿ ಸಲ್ಲಿಸಿದರೂ ಇದುವರೆಗೂ ಸರ್ವೆ ಕಾರ್ಯ ಮಾಡಿಕೊಡದೆ ವಿನಾಕಾರಣ ಕಚೇರಿಗಳಿಗೆ ಅಲೆಸುತ್ತಿರುವ ಅಧಿಕಾರಿಯನ್ನು ಲೋಕಾಯುಕ್ತ ಡಿವೈಎಸ್ಪಿ ನಾಗರಾಜ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಬುಧವಾರ ಕೋಲಾರ ಲೋಕಾಯುಕ್ತ ಪೊಲೀಸರು ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸುವ ವೇಳೆ ತಾಲೂಕಿನ ಮಾಗೊಂದಿ ಪಂಚಾಯ್ತಿ ವ್ಯಾಪ್ತಿಯ ಹೂವರಸನಹಳ್ಳಿ ಗ್ರಾಮದ ಗಂಗಿರೆಡ್ಡಿ ಎಂಬುವರ ತಮ್ಮ ನಾಲ್ಕು ಗುಂಟೆ ಜಮೀನು ವಿವಾದದಲ್ಲಿರುವುದರಿಂದ ಅದನ್ನು ಸರ್ವೆ ಮಾಡಿಸಿಕೊಡಿ ಎಂದು ಕೋರಿ ನಾಲ್ಕು ಬಾರಿ ಸರ್ವೆ ಇಲಾಖೆಗೆ ಅಲೆಯುತ್ತಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಲೋಕಾಯುಕ್ತರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಇಲಾಖೆ ಮೌನವಹಿಸಿರುವುದರ ವಿರುದ್ಧ ಗರಂ ಆದ ಡಿವೈಎಸ್ಪಿ ನಾಗರಾಜ್ ಸುಮ್ಮನೆ ಸಾರ್ವನಿಕರನ್ನು ಹತ್ತಾರು ಬಾರಿ ಅಲೆಸುವ ಮೂಲಕ ಸಾಯಿಸಬೇಡಿ, ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ. ಯಾರದು ತಪ್ಪು ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದಾಗ ಅಧಿಕಾರಿ ನಮ್ಮದೆ ತಪ್ಪು ನಾಳೆಯೇ ಸರ್ವೆ ಮಾಡಿಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಹೇಳಿದರು.
ಪಿಂಚಣಿದಾರರಿಗೆ ಖಜಾನೆ ಇಲಾಖೆ ನೇರವಾಗಿ ಫಲಾನುಭವಿಗೆ ಚೆಕ್ ನೀಡದೆ ಅಕೌಂಟ್ ಪೇ ನೀಡುವುದರಿಂದ ಹತ್ತಾರು ಸಮಸ್ಯೆಗಳು ಉದ್ಭವವಾಗುತ್ತಿದೆ. ನಮಗೆ ನೇರವಾಗಿ ಹಣ ಡ್ರಾ ಮಾಡಿಕೊಳ್ಳಲು ನೇರವಾಗುವಂತಹ ಚೆಕ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ನಿವೃತ್ತ ನೌಕರರು ಮನವಿ ಮಾಡಿಕೊಂಡರು. ಖಜಾನೆ ಇಲಾಖೆಯ ಲೆಕ್ಕಾಧಿಕಾರಿ ವೆಂಕಟೇಶ್ ಕೆನರಾ ಬ್ಯಾಂಕ್ನವರು ಪಿಂಚಣಿದಾರರಿಂದ ವಿನಾಕಾರಣ ಪಿಂಚಣಿ ಹಣ ನೀಡಲು ಲಂಚ ಕೇಳುತ್ತಿದ್ದಾರೆಂದು ಆರೋಪಕ್ಕೆ ಬ್ಯಾಂಕ್ ಮ್ಯಾನೇಜರನ್ನು ಕರೆಸಿ ವಿಚಾರಿಸಿದಾಗ ಅಧಿಕಾರಿ ತಪ್ಪು ಮಾಹಿತಿ ನೀಡಿದ್ದು ಬಯಲಾಗಿ ಎಲ್ಲರ ಎದುರೇ ಅಧಿಕಾರಿಗೆ ಎಚ್ಚರಿಕೆ ನೀಡಿದರು. ಲೋಕಾಯುಕ್ತರು ಬರುವ ಬಗ್ಗೆ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಇಲ್ಲದ ಕಾರಣ ದೂರುಗಳು ಸಲ್ಲಿಕೆಯಾಗಿಲ್ಲ.
ನಂತರ ಮಾತನಾಡಿದ ಡಿವೈಎಸ್ಪಿ ನಾಗರಾಜ್ ಅಧಿಕಾರಿಗಳು ಸಾರ್ವಜನಿಕರನ್ನು ವಿನಾಕಾರಣ ಕಚೇರಿಗಳಿಗೆ ಅಲೆಸುವ ಪ್ರವೃತ್ತಿಯನ್ನು ಕೈ ಬಿಟ್ಟು ತ್ವರಿತವಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿ ಮಾದರಿ ಆಡಳಿತಕ್ಕೆ ಸಹಕರಿಸಬೇಕು ಎಂದು ಸೂಚಿಸಿದರಲ್ಲದೆ ದೂರದ ಗ್ರಾಮಗಳಿಂದ ದೂರು ಸಲ್ಲಿಸಲು ಕೋಲಾರಕ್ಕೆ ಅಥವಾ ಪಟ್ಟಣಕ್ಕೆ ದುಂದು ವೆಚ್ಚ ಮಾಡಿಕೊಂಡು ಬರುವುದನ್ನು ನಿಯಂತ್ರಿಸಲು ಈಗ ಹೋಬಳಿ ಕೇಂದ್ರಗಳಲ್ಲಿಯೂ ಅಹವಾಳುಗಳನ್ನು ಆಲಿಸಲು ಭೇಟಿ ಕೊಡುವುದಾಗಿ ಹೇಳಿದರು. ಲೋಕಾಯುಕ್ತ ವೃತ್ತ ನಿರೀಕ್ಷಕ ಅಶ್ವತನಾರಾಯಣ, ತಹಸೀಲ್ದಾರ್ ಮಂಗಳಾ, ಇಒ ಶ್ರೀನಿವಾಸ್, ಎಇಇ ರಾಮಕೃಷ್ಣಪ್ಪ ಸೇರಿದಂತೆ ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿದ್ದರು.