ನೀರಿಗೆ ಹಾಹಾಕಾರ: ಖಾಲಿ ಕೊಡ ಹಿಡಿದು ಪ್ರತಿಭಟನೆ
ಬಾಗೇಪಲ್ಲಿ: ತಾಲೂಕಿನ ಪಾತಪಾಳ್ಯ ಹೋಬಳಿ ಸೋಮನಾಥಪುರ ಗ್ರಾ.ಪಂ. ವ್ಯಾಪ್ತಿಯ ಸೀಮ್ಮನ್ನಗಾರಿಪಲ್ಲಿ ಗ್ರಾಮಸ್ಥರು ಜಿ.ಪಂ.ವಿಭಾಗದ ಕಚೇರಿಗೆ ಬೀಗ ಜಡಿದು ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.
ಸೀಮ್ಮನ್ನಗಾರಿಪಲ್ಲಿ ಗ್ರಾಮಕ್ಕೆ ಕಳೆದ 5-6 ತಿಂಗಳಿಂದಲೂ ಕುಡಿಯುವ ನೀರು ಸರಬರಾಜು ಇಲ್ಲದೆ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಹಾಗೂ ವಿದ್ಯಾರ್ಥಿಗಳು ನೀರು ತರಲು 2-3 ಕಿ.ಮೀ. ದೂರ ಪಾದಯಾತ್ರೆ ಮಾಡಿ ನೀರು ತರಲು ಪ್ರಯತ್ನ ಮಾಡಿದರೂ ನೀರು ಸಿಗುವುದು ಕಷ್ಟವಾಗಿದೆ. ಕಣಷಿ ಬಾವಿಗಳ ಮಾಲೀಕರನ್ನು ಕಾಡಿ ಬೇಡಿದರೂ ನೀರು ಬಿಡಲು ಒಪ್ಪುತ್ತಿಲ್ಲ. ನಮ್ಮ ಜಮೀನುಗಳಿಗೆ ನೀರು ಹಾಯಿಸಲು ಸಾಧ್ಯವಿಲ್ಲದಿರುವಾಗ ನಿಮಗೆ ನೀರು ಎಲ್ಲಿಂದ ಬಿಡುವುದು ಎಂದು ಹೇಳುತ್ತಾರೆ. ಇದರಿಂದ ಗ್ರಾಮದಲ್ಲಿ ನೀರಿಗೆ ಹಾಹಾಕಾರವಾಗಿದೆ. ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುವ ಬದಲು ನೀರು ತರುವ ಕಾಯಕದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಆನೇಕ ಸಲ ಅಧಿಕಾರಿಗಳ ಹಾಗೂ ಚುನಾಯಿತಿ ಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲವಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ತಾ.ಪಂ ಸದಸ್ಯ ನರಸಿಂಹಪ್ಪ, ಆಲುವೇಲಮ್ಮ, ಜಯಪ್ಪ, ರಹಮತ್ತುಲ್ಲಾ, ರಾಮಲಮ್ಮ, ಸುಬ್ಬಮ್ಮ, ಬಾಷ, ವಹೀದ ಭಾಗವಹಿಸಿದ್ದರು.