ಪ್ರಣಯ ಪಕ್ಷಿಗಳ ಹಾರಾಟಕ್ಕೆ ಪೋಷಕರ ಕತ್ತರಿ!
ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ: ಸಾಕಿ ಸಲುಹಿದ ತಂದೆಯೇ ಈಗ ಮಗಳ ಪಾಲಿಗೆ ವಿಲನ್. ಇನ್ನು ಎರಡು ತಿಂಗಳಲ್ಲಿ 18ನೇ ವಯಸ್ಸಿಗೆ ಪದಾರ್ಪಣೆ ಮಾಡುವ, ಗರ್ಭಿಣಿಯೂ ಎನ್ನಲಾಗಿರುವ ಆಕೆಗೆ ಪ್ರೀತಿಸಿ ಮದುವೆಯಾದವನ ಬಳಿಗೆ ಹೋಗುವ ತುಡಿತ. ಆದರೆ, ಪ್ರೀತಿಸಿ ತಾಳಿಕಟ್ಟಿದವನ ಮೇಲೆ ಬಾಲೆಯ ಅಪಹರಣದ ಕೇಸು. ಇದು ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರೇಮಿಗಳಿಬ್ಬರ ಕತೆ.
ಗುಡಿಬಂಡೆಯ ವಿನಾಯಕ ಬಡಾವಣೆ ನಿವಾಸಿ ಭರತ್ ಒಂದು ದಿನ ತನ್ನ ಪಕ್ಕದ ಮನೆಯ ಹುಡುಗಿಗೆ ಗ್ರೀಟಿಂಗ್ ಕಾರ್ಡ್ ಕೊಟ್ಟಾಗ, ಆಕೆ ಗ್ರೀನ್ ಸಿಗ್ನಲ್ ಕೊಟ್ಟಳು. ಇದು ಮನೆಯವರಿಗೆ ಗೊತ್ತಾಗಿದೆ. ಪ್ರೇಮಿಗಳಿಬ್ಬರನ್ನು ಬೇರೆ ಮಾಡುವ ಕೆಲಸಕ್ಕೆ ಕೈ ಹಾಕಿದ ಹಿನ್ನೆಲೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದಿದೆ. ಪ್ರೇಮಿಗಳು ಶಿರಡಿಗೆ ಹೋಗಿ ಮದುವೆಯಾಗಿದ್ದು, ಹೈದರಾದ್ಗೆ ಹೋಗಿ ನೆಲೆಸಿದ್ದಾರೆ. ಈ ನಡುವೆ ಹುಡುಗಿ ತಂದೆ ದೂರು ನೀಡಿ, ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ದೂರು ದಾಖಲಿಸಿದರಿಂದ ಕಾರ್ಯ ಪ್ರವೃತ್ತರಾದ ಪೊಲೀಸರು ಪ್ರೇಮಿಗಳನ್ನು ಪತ್ತೆ ಹಚ್ಚಿ ಪಟ್ಟಣಕ್ಕೆ ಕರೆದುಕೊಂಡು ಬಂದಿದ್ದು ಹುಡುಗಿಗೆ 18 ವರ್ಷ ತುಂಬಿಲ್ಲ ಎಂದು ಪ್ರೇಮಿಗಳನ್ನು ದೂರ ಮಾಡಿ, ಹುಡುಗಿಯನ್ನು ಆಕೆಯ ತಂದೆ ಮನೆಗೆ ಕಳುಹಿಸಿ ಹಾಗೆಯೇ ಹುಡುಗನಿಗೆ ಎಚ್ಚರಿಕೆ ನೀಡಿದ್ದರು.
ಮತ್ತೆ ಓಡಿ ಬಂದಳು ಬಾಲೆ: ಹುಡುಗಿಯ ಅಪ್ಪ ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಇರುವ ನೆಂಟರ ಮನೆಗೆ ಆಕೆಯನ್ನು ಕಳುಹಿಸಿದ್ದಾರೆ. ಹುಡುಗ ಗೌರಿಬಿದನೂರಿನಲ್ಲಿ ಸೈಬರ್ ಸೆಂಟರ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಇಷ್ಟಾದರೂ ಪ್ರೀತಿ ಬಿಡದ ಹುಡುಗಿಯನ್ನು ಕಂಡ ಆಕೆಯ ಪೋಷಕರು ಬಲವಂತವಾಗಿ ಬೇರೆ ಹುಡುಗನಿಗೆ ಕೊಟ್ಟು ಮದುವೆ ಮಾಡಲು ಸಿದ್ಧತೆ ಕೈಗೊಂಡು, ನೀನು ನಾವು ತಿಳಿಸಿದ ಹುಡುಗನನ್ನು ಮದುವೆಯಾಗಬೇಕು. ಇಲ್ಲವೇ ನಾವು ವಿಷ ಕುಡಿದು ನಿನ್ನ ಕಣ್ಣ ಮುಂದೆಯೇ ಸತ್ತು ಹೋಗುತ್ತೇವೆ ಎಂದು ಬೆದರಿಸಿದರು ಎನ್ನಲಾಗಿದೆ. ಇದರಿಂದ ಆಕೆ ಮತ್ತೆ ಮನೆ ಬಿಟ್ಟು ಓಡಿ ಬಂದಿದ್ದಾಳೆ. ಕೊನೆಗೂ ಇಬ್ಬರು ಸೇರಿಕೊಂಡು ಗೌರಿಬಿದನೂರಿನಲ್ಲಿ ವಾಸಿಸಲು ಮುಂದಾಗುತ್ತಿದ್ದರ ನಡುವೆ ಪೋಷಕರು ಮತ್ತೆ ಅಪಹರಣದ ದೂರನ್ನು ಕೆಜಿಎಫ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದು, ಪೊಲೀಸರು ಬುಧವಾರ ಚಿಕ್ಕಬಳ್ಳಾಪುರಕ್ಕೆ ಪ್ರೇಮಿಗಳು ಆಗಮಿಸಿದ ಸಂದರ್ಭದಲ್ಲಿ ಹುಡುಗಿ ಕರೆದುಕೊಂಡು ಹೋಗಲು ಸಿದ್ಧವಾಗುತ್ತಿದ್ದಂತೆ ಪ್ರಣಯ ಪಕ್ಷಿಗಳ ದುಃಖದ ಕಟ್ಟೆ ಹೊಡೆಯಿತು. ಹುಡುಗಿ ನಾನು ಹೋಗುವುದಿಲ್ಲ. ಏನೇ ಆಗಲಿ ನನ್ನ ಗಂಡನ ಜತೆಯಲ್ಲಿಯೇ ಇರುತ್ತೇನೆ ಎಂದು ಪಟ್ಟು ಹಿಡಿದು ಕುಳಿತು ಬಿಟ್ಟಳು. 18 ವರ್ಷ ತುಂಬಲು ಎರಡು ತಿಂಗಳು ಬಾಕಿಯಿದ್ದು, ನಿಮಗೆ ರಕ್ಷಣೆ ನೀಡುತ್ತೇವೆ. 18 ತುಂಬಿದ ಮೇಲೆ ಕಾನೂನು ಪ್ರಕಾರ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಕೆಜಿಎಫ್ ಠಾಣೆ ಪೊಲೀಸರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಬೇಸರದಿಂದ ಅವರ ಜತೆ ಹೆಜ್ಜೆ ಹಾಕಿದ್ದಾರೆ.
ನಾವು ಬ್ರಾಹ್ಮಣ ಜಾತಿಗೆ ಸೇರಿದವರಾಗಿರುವುದರಿಂದ ನಾನು ಪ್ರೀತಿಸಿದವನ ಜತೆ ಇರಲು ಬಿಡುತ್ತಿಲ್ಲ. ನನಗೆ ಪ್ರಾಣ ಬೆದರಿಕೆ ಇದೆ. ಹಾಗೆಯೇ ಬೇರೆ ಮಾಡಲು ಹುನ್ನಾರ ನಡೆಯುತ್ತಿವೆ. ನನಗೆ ನನ್ನ ಗಂಡ ಬೇಕಷ್ಟೆ.
ಟಿ ಬಾಲಕಿ, ಗುಡಿಬಂಡೆ
ನನ್ನ ಮಗಳನ್ನು ಪ್ರೀತಿಸುವುದನ್ನು ಬಿಡು ಎಂದು ನನ್ನ ಮೇಲೆ ಹಲ್ಲೆ ನಡೆಸಿ, ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಯಿತು. ನಮ್ಮಿಬ್ಬರನ್ನು ಬೇರೆ ಮಾಡುವುದು ಬೇಡ. ನಮ್ಮಷ್ಟಕ್ಕೆ ಬಿಟ್ಟು ಬಿಡಲಿ.
ಟಿ ಭರತ್, ಪ್ರಿಯಕರ, ಗುಡಿಬಂಡೆ
ಕೆಜೆಪಿ ಕಾರ್ಯಕರ್ತರ ಜಾಥಾ
ಶ್ರೀನಿವಾಸಪುರ: ಕೆಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಪಟ್ಟಣದಲ್ಲಿ ಬುಧವಾರ ಚಾಲನೆ ನೀಡಲಾಯಿತು. ಕೆಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಲಕ್ಷ್ಮೀನಾರಾಯಣ್, ರಾಜ್ಯ ಉಪಾಧ್ಯಕ್ಷೆ ಮಧುಶ್ರೀ, ಜಿಲ್ಲಾ ಮುಖಂಡರಾದ ಎಸ್.ಎನ್. ಶ್ರೀರಾಮ್ ಮತ್ತಿತರರು ಮಾತನಾಡಿದರು. ತಾಲೂಕು ಮುಖಂಡರಾದ ಶಂಕರ್, ಚಲಪತಿ, ಶ್ರೀನಿವಾಸ್, ನಂಜೇಗೌಡ, ಶ್ರೀನಿವಾಸರೆಡ್ಡಿ ಪಾಪಿರೆಡ್ಡಿ ಹಾಗೂ ಸುಜಾತಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.