ಸ್ಥಳೀಯ ಸಂಸ್ಥೆ ಚುನಾವಣೆ: ಪರ-ವಿರೋಧ
ಪಾ.ಶ್ರೀ.ಅನಂತರಾಮ್
ಕೋಲಾರ: ಅವಧಿ ಮುಗಿದಿರುವ ನಗರಸಭೆ, ಪುರಸಭೆಗಳಿಗೆ ಚುನಾವಣೆ ಯಾವುದೇ ಘಳಿಗೆಯಲ್ಲಿ ನಡೆಸಿದರೂ ಹೋರಾಟಕ್ಕೆ ಸೈ ಎಂದು ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ, ಶಾಸಕರು ಮಾತ್ರ ತಮ್ಮದೇ ಆದ ರಾಜಕೀಯ ಲೆಕ್ಕಾಚಾರಗಳಿಂದಾಗಿ ಹಿಂದೇಟು ಹಾಕುತ್ತಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ಅವಧಿ ಮುಗಿದಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರವು ಸಹ 2011ರ ಜನಸಂಖ್ಯೆ ಆಧರಿಸಿ ನಿಗದಿ ಪಡಿಸಿದ ಮೀಸಲಾತಿ ಅನ್ವಯ ಚುನಾವಣೆ ನಡೆಸಲು ನಿರ್ಧರಿಸಿ ಕರಡು ಮೀಸಲಾತಿ ಪಟ್ಟಿ ಪ್ರಕಟಿಸಿತ್ತು.
ಆದರೆ, ಈ ಕರಡು ಮೀಸಲಾತಿ ಪಟ್ಟಿ ವಿರೋಧಿಸಿ 2013ಕ್ಕೂ ಹೆಚ್ಚು ಆಕ್ಷೇಪಣೆ ಬಂದಿದ್ದರಿಂದ ಸರ್ಕಾರ ಕರಡು ತಿದ್ದುಪಡಿ ಮಾಡುವವರೆಗೆ ಚುನಾವಣೆ ನಡೆಸುವುದು ಬೇಡವೆಂದು ನಿರ್ಧರಿಸಿತು. ಆದರೆ, ರಾಜ್ಯ ಚುನಾವಣಾ ಆಯೋಗವು ಸರ್ಕಾರ ಚುನಾವಣೆ ನಡೆಸಲು ಮನಸ್ಸಿಲ್ಲದೆ ಮೀಸಲಾತಿ ಪುನರ್ ಪರಿಶೀಲನೆಗೆ ಹಿಂದೇಟು ಹಾಕುತ್ತಿದೆ ಎಂದು ನೋಟಿಸ್ ಜಾರಿಮಾಡಿ, ಇದಕ್ಕೂ ಸರ್ಕಾರ ಜಗ್ಗದಿದ್ದ ಹಿನ್ನಲೆಯಲ್ಲಿ ಹೈಕೋರ್ಟ್ಗೆ ಸರ್ಕಾರದ ವಿರುದ್ಧ ದೂರು ನೀಡಿತ್ತು.
ಆಯುಕ್ತರ ವಿರುದ್ಧವೇ ಆರೋಪ: ಹೈಕೋರ್ಟ್ ಆಯೋಗದ ಅರ್ಜಿಯನ್ನು ಪರಿಶೀಲಿಸಿ ಚುನಾವಣೆ ನಡೆಸುವುದೇ ಸೂಕ್ತವೆಂದು ಸರ್ಕಾರಕ್ಕೆ ಸೂಚನೆ ನೀಡಿದಾಗ, ಧರ್ಮ ಸಂಕಟಕ್ಕೆ ಸಿಲುಕಿದ ಸರ್ಕಾರ ರಾಜ್ಯ ಚುನಾವಣೆ ಆಯೋಗದ ಆಯುಕ್ತರ ವಿರುದ್ಧವೇ ಆರೋಪ ಮಾಡಿತಲ್ಲದೆ, ವಿರೋಧ ಪಕ್ಷದವರು ಹಕ್ಕುಚ್ಯುತಿ ಮಂಡನೆಗೆ ಒತ್ತಾಯ ತರುವಷ್ಟು ಗಂಭೀರತೆ ಸೃಷ್ಟಿಸಿತು.
ಮೇಲ್ಮನವಿ ಸಲ್ಲಿಸಿತ್ತು: ಇದ್ಯಾವುದಕ್ಕೂ ಜಗ್ಗದ ಆಯುಕ್ತರು ತಮ್ಮ ಪರಮಾಧಿಕಾರ ಬಳಿಸಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸುತ್ತೂಲೆ ಜಾರಿ ಮಾಡಿ 2007ರ ಮೀಸಲಾತಿ ಅನ್ವಯವೇ ಚುನಾವಣೆ ನಡೆಸಲು ವಾರ್ಡುವಾರು ಮೀಸಲಾತಿ ಪಟ್ಟಿ ಪ್ರಕಟಿಸಿ ಎಂದಿದ್ದರಿಂದ ಜಿಲ್ಲಾಧಿಕಾರಿಗಳು ನಗರಸಭೆ ಮತ್ತು ಪುರಸಭೆಗಳಲ್ಲಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದರಿಂದ ಸರ್ಕಾರ ಪೇಚಿಗೆ ಸಿಲುಕಿ ಹೈಕೋರ್ಟ್ ನೀಡಿದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.
ಹಾಗೂ ವಿಧಾನಮಂಡಲದಲ್ಲಿ ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ಸಂಬಂಧಿಸಿದಂತೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದ ನಂತರ ವಿದೇಯಕಕ್ಕೆ ರಾಜ್ಯಪಾಲರ ಅಂಕಿತ ಪಡೆಯಲು ವಿದೇಯಕವನ್ನು ರಾಜ್ಯಭವನಕ್ಕೆ ಕಳುಹಿಸಿದೆ. ಸರ್ವಪಕ್ಷಗಳು ಬುಧವಾರ ರಾಜ್ಯಭವನಕ್ಕೆ ತೆರಳಿ ಅಂಕಿತ ಹಾಕುವಂತೆ ಮನವಿ ಮಾಡಿದ್ದಾರೆ.
ಮುಂದೂಡಲು ಕಸರತ್ತು: ಸುಪ್ರೀಂ ಕೋರ್ಟ್ ಸಹ ಹೈಕೋರ್ಟ್ ನೀಡಿರುವ ತೀರ್ಪನ್ನು ಎತ್ತಿ ಹಿಡಿದು ಸ್ಥಳೀಯ ಸಂಸ್ಥೆಗಳಿಗೆ ಅವಧಿ ಮುಗಿದ ನಂತರ ಚುನಾವಣೆ ನಡೆಸಲೇಬೇಕೆಂದು ಹೇಳಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿಯಿದ್ದರೂ ಶಾಸಕರು ಇನ್ನು ಎರಡು ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ಬರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಸಮಯ ಹಾಗೂ ಬಂಡವಾಳ ಹಾಕಲು ತಯಾರಿಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಹೇಗಾದರೂ ಮಾಡಿ ಮುಂದೂಡುವುದಕ್ಕೆ ಕಸರತ್ತು ನಡೆಸಿದ್ದಾರೆ.
ಶಾಸಕರ ಹಿಂದೇಟು: ವಿಧಾನಸಭೆ ಚುನಾವಣೆಗೆ ಮುನ್ನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಲ್ಲಿ ಪ್ರತಿಯೊಂದು ಕ್ಷೇತ್ರಕ್ಕೆ ಹಣ ಖರ್ಚು ಮಾಡಬೇಕು, ಅಭ್ಯರ್ಥಿಗಳ ಆಯ್ಕೆ ಮತ್ತು ಫಲಿತಾಂಶದಲ್ಲಿ ಏನಾದರೂ ಏರುಪೇರಾದಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ, ಈ ಚುನಾವಣೆಯ ಸಾಧಕ-ಭಾದಕಗಳಿಂದ ತಮ್ಮ ಚುನಾವಣೆಯಲ್ಲಿ ಪ್ರತಿಕೂಲ ಪರಿಸ್ಥಿತಿ ಎದುರಾದಲ್ಲಿ ಗೆಲ್ಲುವುದಕ್ಕೆ ಕಷ್ಟವಾಗಬಹುದೆಂಬ ಭಯ, ರಾಜಕೀಯ ಲೆಕ್ಕಾಚಾರದಿಂದ ಶಾಸಕರು ಹಿಂದೇಟು ಹಾಕುತ್ತಿದ್ದಾರೆ.
ಆದರೆ, ಶಾಸಕರಲ್ಲಿ ಇರುವ ಭಯ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಇದ್ದಂತಿಲ್ಲ. ಚುನಾವಣೆ ಯಾವುದೇ ಸಂದರ್ಭದಲ್ಲಿ ನಡೆದರೂ ನಮ್ಮ ಪಕ್ಷ ಎದುರಿಸಲು ಸಿದ್ಧವೆಂದು ಹೇಳಿಕೊಳ್ಳುತ್ತಿದ್ದಾರೆ.
ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಸಿಪಿಎಂ ಪಕ್ಷಗಳು ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಮಾಡಿದರೂ ಎದುರಿಸಲು ಸಿದ್ಧ. ಆದರೆ, 2011ಕ್ಕೆ ಬದಲಾಗಿ 2007ರ ಮೀಸಲಾತಿ ಅನ್ವಯ ಚುನಾವಣೆ ನಡೆದಲ್ಲಿ ಮಹಿಳೆಯರಿಗೆ, ದಲಿತರು, ಹಿಂದುಳಿದವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ