ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಕೃಷ್ಣಸಿಂಗ್
ಮಾಲೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸುವ ಅಭ್ಯರ್ಥಿ ಪರವಾಗಿ ಕಾರ್ಯನಿರ್ವಹಿಸಲು ಸಿದ್ದ ಎಂದು ಕೆ.ಪಿ.ಸಿ.ಸಿ. ಸದಸ್ಯ ಜೆ. ಕೃಷ್ಣಸಿಂಹ್ ಹೇಳಿದರು. ತಾಲೂಕಿನ ಲಕ್ಕೂರು ಗ್ರಾಮದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಿಂದ 10ಮಂದಿ ಆಕಾಂಕ್ಷಿಗಳ ಪಟ್ಟಿ ಹೈಕಮಾಂಡ್ಗೆ ಸೇರಿದೆ. ಎರಡನೇ ಬಾರಿಗೆ ನಾನೂ ಅರ್ಜಿ ಸಲ್ಲಿಸಿದ್ದೇನೆ. ಈ ಆಕಾಂಕ್ಷಿತರ ಪಟ್ಟಿಯಲ್ಲಿರುವ ಯಾವುದೇ ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ತಾಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಗೊಂದಲ ಮೂಡಿದೆ. ಶಾಸಕ ಕೃಷ್ಣಯ್ಯಶೆಟ್ಟರ ಪತ್ನಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವರು ಎಂಬ ಗುಮಾನಿ ಎದ್ದಿದೆ. ಆದರೆ ಈ ಬಗ್ಗೆ ಕಾರ್ಯಕರ್ತರು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು. ಕಳೆದ ಚುನಾವಣೆಯ ಸಂದರ್ಭದಲ್ಲಾದ ತಪ್ಪುಗಳನ್ನು ಈ ಬಾರಿ ತಿದ್ದಿಕೊಂಡು ಪಕ್ಷದ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತೇನೆ ಎಂದ ಅವರು, ಮುಂದಿನ ಸೋಮವಾರದಿಂದ ತಾಲೂಕಿನ ಪ್ರತಿ ಮನೆಗೆ ಭೇಟಿ ನೀಡುವುದಾಗಿ ಹೇಳಿದರು. ಮಂಗಳ ಗುರುಮೂರ್ತಿ, ಲಕ್ಕೂರು ಮೀನಾರಾಜಣ್ಣ, ಸಂದೇಗೌಡ, ಕಬೀರ್ ಅಹಮದ್, ಜೊನ್ನಮುನಿಯಪ್ಪ, ನಾರಾಯಣರೆಡ್ಡಿ, ವಿಶ್ವನಾಥ್ ಇದ್ದರು.