ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಬೇಡ್ಕರ್ ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ: ರಮೇಶ್

Rashmi Kasaragodu
Updated On : 15 Feb 2013, 12:35 pm

ಮಾಲೂರು:  ದಲಿತರ ಶ್ರೇಯೋಭಿವೃದ್ಧಿಗೆ ಜೀವನ ಮುಡುಪಾಗಿಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಪಂಚ ಕಂಡ ಶ್ರೇಷ್ಠ ವ್ಯಕ್ತಿ ಎಂದು ವಿಚಾರವಾದಿ, ಪ್ರಗತಿಪರ ಚಿಂತಕ ನಗರಗೆರೆ ರಮೇಶ್ ಹೇಳಿದರು.
ಇಲ್ಲಿನ ಪುರಸಭೆ ಉದ್ಯಾನವನದಲ್ಲಿ ಗುರುವಾರ ಪುರಸಭೆಯು 9 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ವ್ಯಾಸಂಗ ಹಾಗೂ ಸರ್ಕಾರಿ ಹುದ್ದೆಗಳಲ್ಲಿ ದಲಿತ ಎಂಬ ಕಾರಣಕ್ಕೆ ಶೋಷಣೆಗೆ ಒಳಗಾಗಿದ್ದರು.  ಸರ್ವರಿಗೂ ಸಮಪಾಲು ನೀಡುವಂತಹ ಕಾನೂನು ರಚಿಸಿ, ಮುಂದುವರಿದವರಿಗೂ ಅನ್ಯಾಯವಾಗದಂತೆ ನೋಡಿಕೊಂಡಿದ್ದು ಅಂಬೇಡ್ಕರ್ ಅವರ ಹೆಗ್ಗಳಿಕೆ. ಸಮಾಜದಿಂದ ನೋವು ತಿಂದರೂ ಸಮಾಜದೆಲ್ಲರನ್ನು ಒಂದೇ ಎಂಬ ಭಾವನೆ ಬರಲಿ ಎಂಬ ಆಶಯದಂತೆ ಸಂವಿಧಾನ ರಚಿಸಿದರು ಎಂದರು.
ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವ ಬೆಳೆಸಲು ಸಹಕಾರಿಯಾಗಬೇಕಾದ ಜನಪ್ರತಿನಿಧಿ ಆಯ್ಕೆ ಮಾಡುವ ಚುನಾವಣೆಗಳು ಈಗ ಅರ್ಥ ಕಳೆದುಕೊಳ್ಳುತ್ತಿದೆ. ನಮ್ಮ ಸೇವಕರಾಗಬೇಕಾಗಿದ್ದ ಜನಪ್ರತಿನಿಧಿಗಳು ಒಂದೇ ರೀತಿಯಲ್ಲಿ ಜನರನ್ನು ಶೋಷಣೆ ಮಾಡುವ ಮಹಾ ನಾಯಕರಾಗುತ್ತಿದ್ದಾರೆ. ಇದು ಡಾ. ಅಂಬೇಡ್ಕರ್ ರವರ ಆಶಯಕ್ಕೆ ವಿರುದ್ಧವಾಗಿದೆ ಎಂದರು.
ನೂತನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಮಾರಂಭ ಉದ್ಘಾಟಿಸಿದ ಶಾಸಕ ಕೃಷ್ಣಯ್ಯ ಶೆಟ್ಟಿ ಮಾತನಾಡಿ, ಸಮಾಜದಲ್ಲಿ ಹಿಂಸೆ, ದೌರ್ಜನ್ಯ ಹೆಚ್ಚಾಗಿದ್ದಾಗ ಶ್ರೇಷ್ಠ ಸಂವಿಧಾನ ರಚಿಸುವ ಮೂಲಕ ಸಮಾಜದಲ್ಲಿ ಶಾಂತಿ ತರಲು ಯತ್ನಿಸಿದ ಡಾ.ಅಂಬೇಡ್ಕರ್ ಭೂಮಿಗೆ ಭಗವಂತನ ರೂಪದಲ್ಲಿ ಬಂದವರು ಎಂದು ಬಣ್ಣಿಸಿದರು.
ಕವಿ ಗೂಲ್ಲಹಳ್ಳಿ ಶಿವಪ್ರಸಾದ್, ಮು.ತಿಮ್ಮಯ್ಯ ಮಾತನಾಡಿದರು. 520 ಕೆ.ಜಿ.ಕಂಚಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸುಂದರ ಪ್ರತಿಮೆ ನಿರ್ಮಿಸಿದ ಶಿಲ್ಪಿ ಚಿಂತಾಮಣಿ ಎಸ್.ಮಂಜುನಾಥ್, 25 ಲಕ್ಷಗಳಲ್ಲಿ ಉತ್ತಮ ಉದ್ಯಾನವನ ನಿರ್ಮಿಸಿದ ಗುತ್ತಿಗೆದಾರ ಪ್ರಭಾಕರ್ ರೆಡ್ಡಿ ಹಾಗೂ ನ್ಯಾಯಾಲಯದಲ್ಲಿ ದಾವೆ ಹೂಡಿ ಡಾ.ಬಿ.ಆರ್. ಅಂಬೇಡ್ಕರ್ ಉದ್ಯಾನವನ ಉಳಿಸಿದ ಪುರಸಭೆ ಸದಸ್ಯ ರಾಮಚಂದ್ರ ಅವರನ್ನು ಅತ್ಮೀಯವಾಗಿ ಸನ್ಮಾನಿಸಲಾಯಿತು. ಖ್ಯಾತ ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಕೆ.ಆನಂದ್, ಡಿ.ಆರ್. ರಾಜಪ್ಪ ರವರು ಡಾ. ಬಿ.ಆರ್. ಅಂಬೇಡ್ಕರ್ ಕುರಿತು ರಚನೆಯಾಗಿದ್ದ ಗಾಯನಗಳನ್ನು ಹಾಡಿದರು. ಪುರಸಭೆ ಅಧ್ಯಕ್ಷೆ ಅಮುದಾ ವೇಣು, ತಾ.ಪಂ.ಅಧ್ಯಕ್ಷ ಚಂದ್ರಪ್ಪ, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್, ಜಿ.ಪಂ. ಸದಸ್ಯರಾದ ಯಲ್ಲಮ್ಮ, ಯಶೋಧಮ್ಮ, ರಾಮಸ್ವಾಮಿ ರೆಡ್ಡಿ, ಪ್ರಾಧಿಕಾರ ಅಧ್ಯಕ್ಷ ಕೃಷ್ಣಾರೆಡ್ಡಿ, ಎಪಿಎಂಸಿ ಅಧ್ಯಕ್ಷ ಬೀರಪ್ಪ, ವೇಮನ, ಪುರಸಭೆ ತಾಪಂ ಹಾಗೂ ಗ್ರಾ.ಪಂ. ಸದಸ್ಯರು, ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳು ಮುಖಂಡರು ಇದ್ದರು.
ಸಮಾರಂಭಕ್ಕೂ ಮೊದಲು ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಧಾರ್ಮಿಕ ವಿಧಾನದಲ್ಲಿ ಬೌದ್ಧ ಬಿಕ್ಕುಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಪ್ರಾಂಶುಪಾಲ ವೆಂಕಟಾಪ ಸತ್ಯಂ ಅವರು ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement