ಕೆಜೆಪಿಯಿಂದ ಪಕ್ಷ ಸಂಘಟನೆಗೆ ಪ್ರಚಾರಾಂದೋಲನ
ಕೋಲಾರ: ಕೆಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜಾರಿಗೆ ತಂದ ಜನಪರ ಯೋಜನೆಗಳನ್ನು ಕೋಲಾರ ಕ್ಷೇತ್ರದ ಮತದಾರರಿಗೆ ತಿಳಿಸುವ ಉದ್ದೇಶದಿಂದ ಗುರುವಾರ ಪ್ರಚಾರಾಂದೋಲನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೋಲಾರದ ಶಾಂತಿನಗರದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ತಾಲೂಕು ಸಂಚಾರ ಆರಂಭಿಸಲಾಯಿತು. ಪಕ್ಷದ ರಾಜ್ಯ ಮುಖಂಡ ಈಶ್ವರ್ ಅವರು ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ, ಕೋಲಾರ ಜಿಲ್ಲೆಯಲ್ಲಿ ಪಕ್ಷಕ್ಕೆ ಉತ್ತಮ ಭವಿಷ್ಯವಿದ್ದು, ಕಾರ್ಯಕರ್ತರು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದ ಜನಪರವಾದ ಯೋಜನೆಗಳನ್ನು ಮತದಾರರಿಗೆ ತಿಳಿಸುವ ಮೂಲಕ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯುವುದಕ್ಕೆ ಶ್ರಮಿಸಬೇಕೆಂದರು.
ಪಕ್ಷದ ಮತ್ತೊಬ್ಬ ಮುಖಂಡ ಎಸ್.ಎನ್. ಶ್ರೀರಾಮ್ ಮಾತನಾಡಿ, ಯಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದ ಕಾರ್ಯಕ್ರಗಳನ್ನು ಸಹಿಸಲಾಗದೆ ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡಿ ಅಧಿಕಾರದಿಂದ ಕಳಗೆ ಇಳಿಸಿದ್ದಾರೆ. ಇದಕ್ಕೆ ಉತ್ತರ ನೀಡಲು ಕೆಜೆಪಿ ಕಾರ್ಯಕರ್ತರು ಸನ್ನದ್ಧರಾಗಬೇಕು, ಮುಂದಿನ ಚುನಾವಣೆಯಲ್ಲಿ ಕೆಜೆಪಿ ಜಿಲ್ಲೆಯ ಎಲ್ಲಾ 6 ಕ್ಷೇತ್ರಗಳಲ್ಲಿ ಗೆಲ್ಲುವುದಕ್ಕೆ ಶ್ರಮಿಸಬೇಕೆಂದರು.
ಜಿಲ್ಲಾ ಸಂಚಾಲಕ ಶಿವಾರೆಡ್ಡಿ, ಮುಖಂಡರಾದ ಸಿ.ಡಿ.ರಾಮಚಂದ್ರ, ಮಾರ್ಕೆಟ್ ಕೆಂಪಣ್ಣ, ರಾಜೇಶ್ವರಿ, ಸುಕನ್ಯ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋಲಾರದಿಂದ ಪ್ರಾರಂಭವಾದ ಪ್ರವಾಸ ಕಾರ್ಯಕ್ರಮ ರಾತ್ರಿ ಕ್ಯಾಲನೂರಿನಲ್ಲಿ ಮುಕ್ತಾಯಗೊಂಡಿತು.