ನಾರಾಯಣಸ್ವಾಮಿ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳ ದಾಳಿ
ಬಂಗಾರಪೇಟೆ: ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಎಸ್.ಎನ್. ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ನಾರಾಯಣಸ್ವಾಮಿರವರ ಎಸ್.ಎನ್. ರೆಸಾರ್ಟ್ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಮೂರು ತಂಡಗಳು ರೆಸಾರ್ಟ್, ನಂದಿ ಮೆಡಿಕಲ್ಸ್ ಬಳಿಯಿರುವ ಚಾರಿಟೆಬಲ್ ಟ್ರಸ್ಟ್ ಕಚೇರಿ ಹಾಗೂ ಮನೆ ಮೇಲೂ ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಇತ್ತೀಚೆಗೆ ನಾರಾಯಣಸ್ವಾಮಿ ಟ್ರಸ್ಟ್ ಮುಖಾಂತರ ಸಮಾಜಕ್ಕೆ ಅನುಕೂಲವಾಗುವ ಹತ್ತಾರು ಕಾರ್ಯಚಟುವಟಿಕೆಗಳಲ್ಲಿ ತೊಡಗಿ ಜನಪ್ರಿಯಗೊಳ್ಳುತ್ತಿದ್ದರು. ಆದರೆ ಗುರುವಾರ ದಿಢೀರನೆ ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ನಾರಾಯಣಸ್ವಾಮಿ ಸಾಲ ಮಾಡಿ ಸಮಾಜ ಸೇವೆಯಲ್ಲಿ ತೊಡಗಿರುವುದು ದಾಳಿ ವೇಳೆ ಬಹಿರಂಗಗೊಂಡಿದೆ ಎಂದು ತಿಳಿದು ಬಂದಿದೆ. ಮೂರು ಗಂಟೆಗಳ ಕಾಲ ನಾರಾಯಣಸ್ವಾಮಿಯರಿಂದ ಹಲವು ಮಾಹಿತಿಗಳನ್ನು ಅಧಿಕಾರಿಗಳ ತಂಡ ಪಡೆದುಕೊಂಡಿದೆ. ಆದರೆ ನಾರಾಯಣಸ್ವಾಮಿ ಅನಧಿಕೃತವಾಗಿ ಯಾವುದೇ ಆಸ್ತಿಪಾಸ್ತಿಗಳನ್ನು ಹೊಂದಿಲ್ಲ ಎಂಬುದು ಸಹ ಇದೇ ವೇಳೆ ಬಹಿರಂಗಗೊಂಡಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.