'ಬೇಸಿಗೆ ಬವಣೆ ನೀಗಲು ದಿಟ್ಟ ಕ್ರಮ'
ಬಂಗಾರಪೇಟೆ: ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಅಭಾವ ತಲೆದೋರಿದೆ. ಎಲ್ಲಿಯೂ ಸಮಸ್ಯೆ ಬಾರದಂತೆ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಎಂ.ನಾರಾಯಣಸ್ವಾಮಿ ತಿಳಿಸಿದರು. ಪಟ್ಟಣದ ದೇಶಿಹಳ್ಳಿ ಬಡಾವಣೆಯ ದಿಡಿರ್ ನಗರದಲ್ಲಿ ಬೋರ್ ಕೊರೆಸುವ ಯೋಜನಗೆ ಚಾಲನೆ ನೀಡಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆ ಇಂದು ಹೆಚ್ಚಾಗಿದ್ದು, ಬವಣೆ ನಿವಾರಿಸುವಂತೆ ಪುರಸಭೆ ಹಾಗೂ ಶಾಸಕರ ಗಮನಕ್ಕೆ ತರಲಾಗಿತ್ತು ಎಂದರು. ಕುಡಿಯುವ ನೀರಿಗಾಗಿ ಕ್ಷೇತ್ರಕ್ಕೆ ಕೋಟ್ಯಂತರ ರುಪಾಯಿ ವ್ಯಯಿಸುತ್ತಿದೆ. ಕೆಲವರು ವಿನಾಕಾರಣ ಸಮಸ್ಯೆ ಇಲ್ಲದಿದ್ದರೂ ಸಹ ಸಮಸ್ಯೆ ಇರುವಂತೆ ವಾತಾವರಣ ಸೃಷ್ಟಿಸುತ್ತಿದ್ದಾರೆ. ನಾಗರಿಕರು ಯಾವುದೇ ಅಂಜಿಕೆ ಇಲ್ಲದೆ ನೇರವಾಗಿ ಪುರಸಭೆ ಅಥವಾ ನನ್ನ ಗಮನಕ್ಕೆ ತಂದರೆ ಕೂಡಲೆ ಸ್ವಂದಿಸುವುದಾಗಿ ಭರವಸೆ ನೀಡಿದರು. ಪುರಸಭೆ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಈ ಬಡಾವಣೆ ಹೊಸದಾಗಿ ನಿರ್ಮಾಣವಾಗಿದೆ. ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಪುರಸಭೆಯಿಂದ ಬಡಾವಣೆಗೆ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಇಷ್ಟರಲ್ಲೆ ಕಾಮಗಾರಿ ಪ್ರಾರಂಭವಾಗಲಿದೆ ಎಂದರು. ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್, ಶಶಿಕುಮಾರ್, ಬೆಸ್ಕಾಂ ಎಇಇ ಚಲಪತಿ, ಕಿಟ್ಟಪ್ಪ, ಗೋವಿಂದರಾಜು ಮತ್ತಿತರರು ಇದ್ದರು.