ಭಕ್ತರಿಗೆ ಅಜೀರ್ಣವಾದ ದೇಗುಲ ಜೀರ್ಣೋದ್ಧಾರ ಕಾರ್ಯಕ್ರಮ
ಶಿಡ್ಲಘಟ್ಟ: ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಅಂಟಿಕೊಂಡಿದ್ದ ರಾಜಕೀಯ ಇದೀಗ ಧಾರ್ಮಿಕ ಕ್ಷೇತ್ರದಲ್ಲೂ ಪ್ರವೇಶ ಪಡೆದಿದ್ದು, ತಾಲೂಕಿನ ಬಳುವನಹಳ್ಳಿ ಗ್ರಾಮದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ರಾಜಕೀಯ ಕರಿನೆರಳು ಆವರಿಸಿ ಭಕ್ತರಲ್ಲಿ ಗೊಂದಲ ಸೃಷ್ಟಿ ಮಾಡಿದೆ.
ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಹಳೆಯ ದೇವಾಲಯದ ಉದ್ಘಾಟನೆ ವಿಚಾರವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿವೆ. ಒಂದೇ ದೇವಾಲಯದ ಉದ್ಘಾಟನೆ ಕಾರ್ಯಕ್ರಮಕ್ಕೆ ಒಂದೇ ದಿನದಲ್ಲಿ ಪ್ರತ್ಯೇಕ ಸಮಯ ನಿಗದಿಪಡಿಸಿ ಪ್ರತ್ಯೇಕ ಅಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಹಂಚಿ ಜನರ ಧಾರ್ಮಿಕ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಭಕ್ತರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.
ಜಂಗಮಕೋಟೆ ಹೋಬಳಿಯ ಬಳುವನಹಳ್ಳಿ ಗ್ರಾಮದಲ್ಲಿದ್ದ ಪುರಾತನ ಲಕ್ಷೀವೆಂಕಟರಮಣಸ್ವಾಮಿ ದೇವಾಲಯ ಜೀರ್ಣೋದ್ಧಾರಗೊಂಡಿದ್ದು ಶುಕ್ರವಾರ ಉದ್ಘಾಟನೆ, ಮಹಾಮಂಗಳಾರತಿ ಹಾಗೂ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕೆ ಸಂಬಂಧಪಟ್ಟಂತೆ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಪಕ್ಷಗಳ ಮುಖಂಡರ ಹೆಸರನ್ನು ಹಾಕಿ ಪ್ರತ್ಯೇಕ ಸಮಯ ನಿಗದಿಮಾಡಿ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿದ್ದಾರೆ. ಮೊದಲ ಆಹ್ವಾನಪತ್ರಿಕೆಯಲ್ಲಿ ಶುಕ್ರವಾರ ಬೆಳಿಗ್ಗೆ 9ರಿಂದ 10.30 ಗಂಟೆಗೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕ ವಿ.ಮುನಿಯಪ್ಪ ಉದ್ಘಾಟನೆ ಕಾರ್ಯ ನೆರವೇರಿಸಲಿದ್ದಾರೆ. ರಾಜ್ಯ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿದ್ದು, ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಮುದ್ರಿಸಲಾಗಿದೆ.
ಮತ್ತೊಂದು ಆಹ್ವಾನ ಪತ್ರಿಕೆಯಲ್ಲಿ ಶುಕ್ರವಾರ ಮಧ್ಯಾಹ್ನ 12.15ಕ್ಕೆ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಆಹ್ವಾನಿಸಿ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ರಾಜಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮುದ್ರಿಸಲಾಗಿದೆ. ಇದರಿಂದ ಭಕ್ತರಲ್ಲಿ ಗೊಂದಲ ತಲೆಯೆತ್ತಿದೆ.
ನೂತನವಾಗಿ ಜೀರ್ಣೋದ್ಧಾರ ಕಂಡಿರುವ ದೇವಾಲಯವನ್ನು ಅಭಿವೃಧ್ಧಿಪಡಿಸಲು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ರಾಜಣ್ಣ ಅವರ ಕೊಡುಗೇನು? ಎಂದು ಕಾಂಗ್ರೆಸಿಗರು ಪ್ರಶ್ನಿಸಿದ್ದಾರೆ. ಶಾಸಕ ವಿ.ಮುನಿಯಪ್ಪ ಅವರು ತಮ್ಮ ಕ್ಷೇತ್ರಾಭಿವೃಧ್ಧಿ ನಿಧಿಯಿಂದ ನೆರವು ನೀಡಿದ್ದಾರೆ ಎನ್ನುತ್ತಾರೆ. ಆದರೆ, ಧಾರ್ಮಿಕ ಕಾರ್ಯಕ್ರಮ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಭಕ್ತರನ್ನು ಕೆಂಗಡಿಸಿದೆ.
ಈ ನಡುವೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಗಳು ಯಾರ ಆಹ್ವಾನ ಪತ್ರಿಕೆಗೆ ಆದ್ಯತೆ ಕೊಟ್ಟು ಬರುತ್ತಾರೋ ಎನ್ನುವುದು ಕುತೂಹಲ ಕೆರಳಿಸಿದೆ. ಗ್ರಾಮದ ಹಿರಿಯರು ದೇವಾಲಯದ ಕಾರ್ಯಕ್ರಮದ ಮೇಲೆ ರಾಜಕೀಯದ ಕರಿನೆರಳು ಬೀಳದೇ ಎಲ್ಲರು ಸೌಹಾರ್ದದಿಂದ ಕಾರ್ಯಕ್ರಮ ನಡೆಸಲು ಕ್ರಮ ಕೈಗೊಂಡು ಗ್ರಾಮದಲ್ಲಿ ಐಕ್ಯತೆ ಕಾಪಾಡಬೇಕಿದೆ.