ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯರಗೋಳ್ ಯೋಜನೆಗಾಗಿ ನೀರು ಹುಯ್ದುಕೊಂಡರು...

Rashmi Kasaragodu
Updated On : 15 Feb 2013, 12:37 pm

ಬಂಗಾರಪೇಟೆ:  4 ತಾಲೂಕಿಗೆ ಕುಡಿಯುವ ನೀರು ಪೂರೈಸುವ ಯರಗೋಳ್ ಯೋಜನೆ ಅನುಷ್ಟಾನಕ್ಕೆ ಸರ್ಕಾರ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಆತ್ಮವಿಶ್ವಾಸ ವೇದಿಕೆ ಮುಖಂಡರು ತಲೆ ಮೇಲೆ ನೀರು ಸುರಿದುಕೊಂಡು ವಿನೂತನವಾಗಿ ಪ್ರತಿಭಟಿಸಿದರು.
ಕೋಲಾರ ಮುಖ್ಯ ರಸ್ತೆಯ ಅಂಬೇಡ್ಕರ್ ಪ್ರತಿಮೆ ಎದುರು ನೀರು ತಲೆ ಮೇಲೆ ಸುರಿದುಕೊಂಡು ಮಾಡಿದ ಪ್ರತಿಭಟನೆ ಎಲ್ಲರ ಗಮನ ಸೆಳೆಯಿತು. 8 ವರ್ಷಗಳ ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯರಗೋಳ್ ಯೋಜನೆಗೆ ಚಾಲನೆ ನೀಡಿದರು. ನಂತರ ಬಂದ ಬಿಜೆಪಿ ಸರ್ಕಾರ ಯೋಜನೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಬರೀ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಚುನಾವಣೆ ಸಮಯದಲ್ಲಿ ಮಾತ್ರ ಯೋಜನೆ ಬಗ್ಗೆ ಮಾತನಾಡಿದರು. ನಂತರ ಯಥಾವತ್ತಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಜನರ ಜತೆ ಜಾನುವಾರುಗಳೂ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲೆಯಲ್ಲಿ ನದಿ ನಾಲೆಗಳಿಲ್ಲದೆ ಸದಾ ಮಳೆಯಾಶ್ರಿತ ಪ್ರದೇಶವಾಗಿದೆ. ಪ್ರತಿವರ್ಷ ನೀರಿಗಾಗಿ ಕಾದಾಟ ಮಾಮೂಲಿಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಸಲುವಾಗಿ ಡಾ. ಪರಮಶಿವಯ್ಯ ನೇತೃತ್ವದಲ್ಲಿ ರಚಿಸಲಾಗಿದ್ದ ಆಯೋಗದ ವರದಿ ಸರ್ಕಾರ ಕೈ ಸೇರಿ ವರ್ಷಗಳೇ ಉರುಳಿದರೂ ಅನುಷ್ಟಾನಕ್ಕೆ ಮಾತ್ರ ತಂದಿಲ್ಲ. ಅಲ್ಲದೆ, ಈ ಬಾರಿಯ ಬಜೆಟ್‌ನಲ್ಲಿ ಎರಡೂ ಜಿಲ್ಲೆಗಳಿಗೆ ನೀರಾವರಿಗೆ ವಿಶೇಷ ಆದ್ಯತೆ ನೀಡುವುದಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭರವಸೆ ನೀಡಿದ್ದರು. ಆದರೆ, ಅವರು ನುಡಿದಂತೆ ನಡೆದುಕೊಳ್ಳದೆ ಜಿಲ್ಲೆಯ ಜನರಿಗೆ ಮೋಸ ಎಸೆಗಿದ್ದಾರೆ ಎಂದು ಸರ್ಕಾರದ ನಿಲುವನ್ನು ಖಂಡಿಸಿ ಈ ಕೂಡಲೆ ಯರಗೋಳ್ ಯೋಜನೆಯ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಎಸ್.ಎನ್. ಭಾರದ್ವಾಜ್, ಜಿಲ್ಲಾಧ್ಯಕ್ಷ ರಾಜು, ನಗರ ಅಧ್ಯಕ್ಷ ಶೇಖರ್, ಬೇಕರಿ ಶ್ರೀನಿವಾಸ್, ಲಯನ್ ನಂದಾ, ನಯಾಜ್ ಅಹ್ಮದ್ ಅಬ್ಬಾಯಪ್ಪ, ತನ್ವಿರ್ ಅಹ್ಮದ್,ಪ್ರಕಾಶ್, ನಾರಾಯಣಸ್ವಾಮಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement