ದೇವಾಲಯಕ್ಕೆ ಎರಡು ಉದ್ಘಾಟನೆ ಭಾಗ್ಯ!
ಶಿಡ್ಲಘಟ್ಟ: ರಾಜಕೀಯ ಪ್ರವೇಶದಿಂದಾಗಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗೊಂದಲ ಮೂಡಿದ್ದರೂ, ಪ್ರತ್ಯೇಕವಾಗಿ ಎರಡೂ ಕಡೆ ಒಂದೇ ದೇವಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ತಾಲ್ಲೂಕಿನ ಬಳುವನಹಳ್ಳಿಯ ಪುರಾತನ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ರಾಜಕೀಯ ಪ್ರತಿಷ್ಠೆಯನ್ನಾಗಿಸಿ ಪ್ರತ್ಯೇಕ ಆಹ್ವಾನ ಪತ್ರಿಕೆ ಹಂಚಲಾಗಿತ್ತು. ಅದರಂತೆ ಪ್ರತ್ಯೇಕವಾಗಿ ಎರಡು ಕಡೆ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.
ಶಾಸಕ ವಿ.ಮುನಿಯಪ್ಪ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಸಿ.ವಿ.ಲೋಕೇಶ್ ಹಾಗೂ ಗ್ರಾಮದ ಕೆಲವು ಮುಖಂಡರು ಕಾರ್ಯಕ್ರಮ ನಡೆಸಿದರು.
ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ವೇದಿಕೆಗೆ ಭೇಟಿ ನೀಡದೆ ದೇವರ ದರ್ಶನ ಪಡೆದು ಹಿಂತಿರುಗಿದರು. ದೇವಾಲಯದ ಮುಂಭಾಗದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ರಾಜಣ್ಣ ಅಧ್ಯಕ್ಷತೆಯಲ್ಲಿ ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಉದ್ಘಾಟಿಸಿ ಆಶೀವರ್ಚನ ನೀಡಿದರು. ದೇವನಹಳ್ಳಿ ಮಾಜಿ ಶಾಸಕ ಚಂದ್ರಣ್ಣ, ಬಿಜೆಪಿ ಮುಖಂಡ ಶ್ರೀರಾಮರೆಡ್ಡಿ, ನಿರ್ಮಲಾ ಜಯರಾಮ್, ವೆಂಕಟಾಪುರ ರಾಮಚಂದ್ರ, ಜಿ.ಪಂ.ಸದಸ್ಯೆ ಶಿವಲೀಲಾ ರಾಜಣ್ಣ, ಮುನೇಗೌಡ, ದೇವರಾಜ್, ಪಿಳ್ಳಮುನಿಶಾಮಪ್ಪ, ಮುಂತಾದವರು ಉಪಸ್ಥಿತರಿದ್ದರು. ದೇವಾಲಯದ ಪುನರ್ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಿದವರನ್ನು ಮಂಗಳಾನಂದನಾಥ ಸ್ವಾಮೀಜಿ ಸನ್ಮಾನಿಸಿದರು.