ಮಕ್ಕಳಲ್ಲಿ ಧಾರ್ಮಿಕ ಭಾವನೆ ಬೆಳೆಸಿ: ಶಿವರುದ್ರ ಸ್ವಾಮೀಜಿ
ಶಿಡ್ಲಘಟ್ಟ: ಇತ್ತೀಚಿನ ದಿನಗಳಲ್ಲಿ ನಾಗರಿಕತೆ ಮತ್ತು ಧಾರ್ಮಿಕತೆ ಮರೆಯಾಗುತ್ತಿದ್ದು ಮುಂದಿನ ಪೀಳಿಗೆಯ ದೃಷ್ಟಿಯಿಂದ ಧಾರ್ಮಿಕ ಭಾವನೆ ತುಂಬುವ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಕ್ಕಳನ್ನು ಸಂಸ್ಕಾರ ವಂತರನ್ನಾಗಿ ಮಾಡಬೇಕಾಗಿದೆ ಎಂದು ಬೇಲಿ ಮಠದ ಶಿವರುದ್ರ ಮಹದೇವ ಸ್ವಾಮೀಜಿ ಕಿವಿಮಾತು ಹೇಳಿದರು.
ಪಟಣ್ಣದ ಪುರಾಣ ಪ್ರಸಿದ್ಧ ನಗರೇಶ್ವರ ಸ್ವಾಮಿ ದೇವಾಲಯದ ಪುನರ್‌ಪ್ರತಿಷ್ಠೆ ಮತ್ತು ರಾಜಗೋಪುರದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಆಶೀರ್ವಚನ ಮಾತನಾಡಿದ ಅವರು, ಜಾಗತಿಕ ಒಪ್ಪಂದಗಳಿಂದಾಗಿ ವ್ಯಾಪಾರ ಸಂಸ್ಥೆಗಳು ದೇಶದಲ್ಲಿ ಸ್ಥಾಪಿತಗೊಂಡು ವ್ಯಾಪಾರ ವೃತಿಯನ್ನೇ ಕುಲಕಸುಬನ್ನಾಗಿ ಮಾಡಿಕೊಂಡಿದ್ದ ಕೆಲವು ಸಮಾಜದ ಯುವಕರಲ್ಲಿ ನಿರುದ್ಯೋಗದ ಭೀತಿ ಕಾಡುತ್ತಿದ್ದು, ಜಗತ್ತು ಬದಲಾದಂತೆ ವರ್ತಕ ಸಮಾಜವೂ ಸಹ ವ್ಯಾಪಾರ ವ್ಯವಹಾರಗಳಲ್ಲಿ ಬದಲಾವಣೆ ತರಬೇಕೆಂದರು. ವಾಸ್ತುಶಿಲ್ಪಿ ಡಾ.ಗೌರಿ ಪ್ರಸಾದ್‌ನಗರ್ತ, ಮಂಡಳಿ ರಾಜ್ಯಾಧ್ಯಕ್ಷ ಹೆಚ್.ಎಸ್.ಬಸವರಾಜ್, ನಗರ್ತ ಕಲ್ಯಾಣ ಮಹಾಮಂಡಳಿ ಅಧ್ಯಕ್ಷ ವೆಂಕಟರತ್ನ ಮಾತನಾಡಿದರು. ದೇವಾಲಯ ನಿರ್ಮಾಣಕ್ಕೆ ಸಹಕರಿಸಿದ, ವಿವಿಧ ಕ್ಷೇತ್ರಗಳಲ್ಲಿ ದುಡಿದವರನ್ನು ಸನ್ಮಾನಿಸಲಾಯಿತು. ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ನಗರ್ತ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ ಸುರೇಶ್‌ಬಾಬು ಉಪಸ್ಥಿತರಿದ್ದರು.