'ವಿವಿಗಳಿಗೆ ಶಾಸಕರ ನಾಮ ನಿರ್ದೇಶನ ಬೇಡ'
ಕೋಲಾರ: ರಾಜ್ಯದ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗೆ ಕಡ್ಡಾಯವಾಗಿ ಇಬ್ಬರು ವಿಧಾನಸಭೆ ಮತ್ತು ವಿಪ ಸದಸ್ಯರ ನಾಮನಿರ್ದೇಶನ ಮಾಡುವ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದೆಂದು ಒತ್ತಾಯಿಸಿ, ಎಬಿವಿಪಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ವಿಶ್ವವಿದ್ಯಾನಿಲಯಗಳ ಕಾಯ್ದೆ 2000 ತಿದ್ದುಪಡಿ ತಂದು 5 ಜನರಿಗೆ ಗೌರವ ಡಾಕ್ಟರೇಟ್ ಪ್ರದಾನ ಸೀಮಿತಗೊಳಿಸಿರುವುದು, ವಿಶ್ವವಿದ್ಯಾನಿಲಯಗಳ ಕುಲಪತಿಗಳ ವಿರುದ್ಧ ಆರೋಪ ಕೇಳಿ ಬಂದಾಗ ವಿಚಾರಣಾ ಸಮಿತಿಗಳು 3 ತಿಂಗಳೊಳಗೆ ತನಿಖಾ ವರದಿಯನ್ನು ಸಲ್ಲಿಸಬೇಕು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಸ್ವಾಗತಾರ್ಹ. ಆದರೆ, ರಾಜಕಾರಣಿಗಳನ್ನು ನಾಮನಿರ್ದೇಶನ ಮಾಡುವುದು ಸಲ್ಲದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ರಾಜ್ಯ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳ ಅಭಿಪ್ರಾಯವನ್ನು ಕೇಳದೇ ಏಕಾಏಕಿ ಈ ನಿರ್ಧಾರವನ್ನು ಕೈಗೊಂಡಿರುವುದು ಖಂಡನೀಯ. ವಿಶ್ವವಿದ್ಯಾಲಯಗಳ ಆಡಳಿತ ಅಧಿಕಾರಿ ಸ್ಥಾನಕ್ಕೆ ಅಖಿಲ ಭಾರತ ಸೇವೆಗೆ ಒಳಪಟ್ಟ ಐ.ಎ.ಎಸ್., ಐ.ಪಿ.ಎಸ್., ಐ.ಎಫ್.ಎಸ್ ಅಧಿಕಾರಿಗಳ ನೇಮಕ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಮುರಳಿ, ಶ್ವೇತ, ಹರೀಶ್, ಪುನೀತ್, ನವೀನ್, ಶಿವು, ರಾಖೇಶ್, ಮುನಿಯಪ್ಪ, ಪ್ರದೀಪ್, ಅಶ್ವಿನಿ, ಪಲ್ಲವಿ, ಪವಿತ್ರ ಇದ್ದರು.
ರಾಜ್ಯ ಸಮಿತಿಗೆ ಆಯ್ಕೆ: ಎಬಿವಿಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿಲ್ಲೆಯಿಂದ ಆರ್.ಎನ್. ಮುರಳಿಧರ್ ಹಾಗೂ ಶ್ವೇತ ಅವರನ್ನು ಆಯ್ಕೆ ಮಾಡಲಾಗಿದೆ.