ಗೊಂದಲಕ್ಕೆ ತೆರೆ ಎಳೆಯಲು ಜಿಲ್ಲಾ ಜೆಡಿಎಸ್ ಕಸರತ್ತು
ಕೋಲಾರ: ವಿಧಾನಸಭೆ ಚುನಾವಣೆಗಾಗಿ ಈಗಾಗಲೇ ತಯಾರಿ ನಡೆಸಿರುವ ಜೆಡಿಎಸ್ ಮುಖಂಡರು ಹಾಗೂ ರಾಜಕೀಯ ಲಾಭಕ್ಕಾಗಿ ಪಕ್ಷಕ್ಕೆ ಸೇರಿರುವವರ ನಡುವೆ ಉಂಟಾಗಿರುವ ಮನಸ್ತಾಪ, ಗೊಂದಲ ಮತ್ತು ಕಂದಕ ನಿವಾರಣೆ ಮಾಡಲು ಹಿರಿಯ ಮುಖಂಡರು ಕಸರತ್ತು ನಡೆಸಿದ್ದಾರೆ.
ಮುನಿದವರನ್ನು ಬೆಸೆದು ಪಕ್ಷದ ಸಂಘಟನೆಗೆ ಯಾವುದೇ ರೀತಿಯಲ್ಲಿ ಹಾನಿ ಆಗದಂತೆ ಕಾರ್ಯತಂತ್ರ ರೂಪಿಸಲು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಅವರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೂಚಿಸಿರುವ ಹಿನ್ನೆಲೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಭಿನ್ನಮತ ಶಮನಕ್ಕಾಗಿ ಪ್ರಯತ್ನ ನಡೆಸಲಾಗುತ್ತಿದೆ.
ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ ತಮಗೇ ಟಿಕೆಟ್ ಗ್ಯಾರಂಟಿ ಎಂದು ನಂಬಿ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ನಡೆಸುತ್ತಿರುವಾಗಲೇ ಬಿಜೆಪಿ ತೊರೆದು ಜೆಡಿಎಸ್ ಸೇರಿದ ಮಾಜಿ ಶಾಸಕ ಬಿ.ವಿ. ವೆಂಕಟಮುನಿಯಪ್ಪ ಅವರು ಸಹ ಮುಂದಿನ ಚುನಾವಣೆಗೆ ಟಿಕೆಟ್ ಬಯಸಿರುವುದರಿಂದ ಇವರಿಬ್ಬರ ನಡುವೆ ಮಾತ್ರವಲ್ಲದೆ ಕಾರ್ಯಕರ್ತರಲ್ಲೂ ಗೊಂದಲ ಉಂಟಾಗಿದ್ದರಿಂದ ಇದನ್ನು ಶಮನ ಮಾಡಲು ಗೋವಿಂದಗೌಡರು ಪೌರೋಹಿತ್ಯ ವಹಿಸಿ, ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುಂಚೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಬಂದಿರುವುದರಿಂದ ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಪರಿಣಾಮ ಬೀರಬಾರದೆಂಬ ಉದ್ದೇಶದಿಂದ ಜೆಡಿಎಸ್ ಕಾರ್ಯಾಧ್ಯಕ್ಷ ಗೋವಿಂದಗೌಡ ಶುಕ್ರವಾರ ಬಂಗಾರಪೇಟೆಗೆ ಭೇಟಿ ನೀಡಿ ಮಾಜಿ ಶಾಸಕ ವೆಂಕಟಮುನಿಯಪ್ಪ ಹಾಗೂ ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ ಅವರನ್ನು ಒಂದೇ ವೇದಿಕೆಗೆ ಕರೆ ತಂದು ಇವರಿಬ್ಬರಲ್ಲಿ ಯಾವುದೇ ಭಿನ್ನಮತವಿಲ್ಲ. ಒಟ್ಟಾಗಿದ್ದಾರೆಂಬುದನ್ನು ಸಾಬೀತು ಮಾಡಲು ಕಸರತ್ತು ನಡೆಸಿದ್ದಾರೆ.
ಪ್ರಸ್ತುತ ಕಾಂಗ್ರೆಸ್ ವಶದಲ್ಲಿರುವ ಬಂಗಾರಪೇಟೆ ಪುರಸಭೆಯನ್ನು ಜೆಡಿಎಸ್ ವಶಕ್ಕೆ ಪಡೆಯುವುದು ಈ ಕಾರ್ಯತಂತ್ರದ ಗಿಮಿಕ್‌ಗಳಲ್ಲಿ ಒಂದಾಗಿದೆ. ವಿಧಾನಸಭಾ ಚುನಾವಣೆಯವರೆಗೂ ಮಾಜಿ ಶಾಸಕ ವೆಂಕಟಮುನಿಯಪ್ಪ ಹಾಗೂ ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ ನಡುವೆ ಹೊಂದಾಣಿಕೆ ಮುಂದುವರಿಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ಬಂಗಾರಪೇಟೆ ರೀತಿಯಲ್ಲೇ ಮಾಲೂರಿನಲ್ಲೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್ ಹಿರಿಯ ಮುಖಂಡ ಪ್ರಭಾಕರ್ ಹಾಗೂ ಕ್ಷೇತ್ರಕ್ಕೆ ವಲಸೆ ಬಂದಿರುವ ಕೋಡಿಹಳ್ಳಿ ಮಂಜುನಾಥ್ ನಡುವೆ ತೀವ್ರ ಪೈಪೋಟಿ ಉಂಟಾಗಿರುವುದರಿಂದ ಇವರಿಬ್ಬರನ್ನು ಒಗ್ಗೂಡಿಸಲು ಗೋವಿಂದಗೌಡರು ಗಾಳ ಬೀಸಿದ್ದಾರೆ. ಮಾಲೂರು ಸಮಸ್ಯೆ ಬಂಗಾರಪೇಟೆಗಿಂತ ಜಟಲವಾಗಿದ್ದು ಸಮಸ್ಯೆ ನಿವಾರಣೆ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ.
ಪ್ರಭಾಕರ್ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ನಂಬಿ ಟಿಕೆಟಿಗಾಗಿ ಪ್ರಯತ್ನ ನಡೆಸುತ್ತಿದ್ದರೆ, ಮಂಜುನಾಥಗೌಡ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಮೂಲಕ ಲಾಬಿ ಮಾಡಿಸಿ ಟಿಕೆಟ್ ಪಡೆಯಲು ಮುಂದಾಗಿರುವುದರಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೇ ಸಂಕಟಕ್ಕೆ ಸಿಲುಕುವಂತಾಗಿದೆ. ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಗೋವಿಂದಗೌಡರು ಕುಮಾರಸ್ವಾಮಿ ಅವರಿಗೆ ತಲೆಬಿಸಿ ಕಡಿಮೆ ಮಾಡಲು ತಾವೇ ಸ್ವಆಸಕ್ತಿಯಿಂದ ಮಾಲೂರು ಕ್ಷೇತ್ರದ ಸಮಸ್ಯೆ ನಿವಾರಣೆ ಮಾಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಬಿಜೆಪಿ ವಶದಲ್ಲಿರುವ ಮಾಲೂರು ಪುರಸಭೆಯನ್ನು ಪಕ್ಷದ ಹಿಡಿತಕ್ಕೆ ತೆಗೆದುಕೊಂಡಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅನುಕೂಲವಾಗಬಹುದು ಎಂಬ ಕಾರಣದಿಂದ ಗೋವಿಂದಗೌಡರು ಪ್ರಭಾಕರ್ ಮತ್ತು ಮಂಜುನಾಥಗೌಡರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ.
ಮುಳಬಾಗಿಲು ಕ್ಷೇತ್ರದಲ್ಲಿ ಮುನಿಆಂಜನಪ್ಪ, ಆದಿನಾರಾಯಣ ಹಾಗೂ ಆಲಂಗೂರು ಶಿವಣ್ಣ ನಡುವೆ ಇರುವ ವ್ಯತ್ಯಾಸಗಳನ್ನು ಸರಿಪಡಿಸುವುದಕ್ಕೂ ಗೋವಿಂದಗೌಡರು ಚಿಂತನೆ ನಡೆಸಿದ್ದು ಫೆ.20 ರೊಳಗೆ ಪಕ್ಷದಲ್ಲಿ ಮುನಿಸಿಕೊಂಡಿರುವ ಎಲ್ಲರನ್ನು ಒಗ್ಗೂಡಿಸಿ ಜಿಲ್ಲೆಯ ಜೆಡಿಎಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲ ಎಂಬುದನ್ನು ಸಾರಲು ನಿರ್ಧರಿಸಿದ್ದಾರೆ. ಗೌಡರ ಯತ್ನಕ್ಕೆ ಎಷ್ಟರ ಮಟ್ಟಿಗೆ ಫಲ ಸಿಗುತ್ತದೆ ಎಂಬುದು ಮಾ.7ರ ನಂತರವಷ್ಟೇ ತಿಳಿಯಲು ಸಾಧ್ಯ.