23ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕೋಲಾರ: ಮಾ.7ರಂದು ಕೋಲಾರ ನಗರಸಭೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜಿಲ್ಲಾ ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ.
ಈ ಸಂಬಂಧ ಭಾನುವಾರ ನಗರದ ಕೆ.ಎಚ್. ಮುನಿಯಪ್ಪ ಅವರ ನಿವಾಸದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಸೂಕ್ತ ಅಭ್ಯರ್ಥಿಗಳ ಆಯ್ಕೆಯಾಗಿ ಪಕ್ಷದ ಹಿರಿಯ ಮುಖಂಡರನ್ನು ಒಳಗೊಂಡ ಉನ್ನತಮಟ್ಟದ ಸಮಿತಿ ಹಾಗೂ ನಾಲ್ಕು ಉಪ ಸಮಿತಿ ರಚನೆ ಮಾಡುವುದಾಗಿ ಘೋಷಣೆ ಮಾಡಿದರು.
ಈ ಸಮಿತಿ ಫೆ.21 ರೊಳಗೆ ಎಲ್ಲಾ 35 ವಾರ್ಡುಗಳಲ್ಲಿನ ಹಿರಿಯ ಮುಖಂಡರು, ಎಲ್ಲಾ ವರ್ಗದ ಜನರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಣೆ ಮಾಡಿ ಫೆ.22ಕ್ಕೆ ಅಂತಿನ ಪಟ್ಟಿ ಸಿದ್ಧಪಡಿಸಿ ಫೆ.23ರಂದು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿರುವುದರಿಂದ ಅಂದೇ ಅಧಿಕೃತ ಅಭ್ಯರ್ಥಿಗಳ ಘೋಷಣೆ ಮಾಡಲಿದೆ ಎಂದರು.
ಪಕ್ಷದಲ್ಲಿ ಬಂಡಾಯ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ, ಒಂದು ವೇಳೆ ಟಿಕೆಟ್ ಸಿಗದಿದ್ದವರು ನಿರಾಸೆಯಿಂದ ಪಕ್ಷಾಂತರ ಮಾಡಬಾರದು. ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದರು.
ಕಳೆದ ಸಾರಿ ಪಕ್ಷದಿಂದ ಗೆದ್ದವರು ಕೆಲವರು ಹಣಕ್ಕಾಗಿ ಮತ್ತು ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡಿರುವುದು ಬೇಸರ ತಂದಿದೆ. ಈ ಬಾರಿ ಈ ರೀತಿ ಆಗುವುದಕ್ಕೆ ಅವಕಾಶ ನೀಡುವುದಿಲ್ಲ. ಸದಸ್ಯರು ಸಹ ತಮ್ಮ ತಪ್ಪಿನ ಬಗ್ಗೆ ಆತ್ಮಾವಲೋಕನೆ ಮಾಡಿಕೊಳ್ಳುವುದು ಸೂಕ್ತ ಎಂದರು.ಪಕ್ಷದ ಚಿಹ್ನೆ ಮೇಲೆ ಗೆದ್ದನಂತರ ಪಕ್ಷಕ್ಕೆ ನಿಷ್ಟರಾಗಿರಬೇಕು. ಹಣಕ್ಕಾಗಿ ತಮ್ಮನ್ನು ಮಾರಿಕೊಳ್ಳುವುದು ಸರಿಯಲ್ಲ. ಕೋಲಾರ ನಗರವನ್ನು ಅಭಿವೃದ್ಧಿಪಡಿಸಲು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದ್ದು ಇದಕ್ಕಾಗಿ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡದಿದ್ದರೆ ಮತ್ತೆ ನಗರಸಭೆ ಹಾಳಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್ ಮಾತನಾಡಿ, ಕೋಲಾರ ದೊಡ್ಡ ಹಳ್ಳಿಯಂತಿದೆ. ಸಚಿವ ವರ್ತೂರ್ ಪ್ರಕಾಶ್ ಅವರು, ಕೋಲಾರಕ್ಕೆ ನೀರು ತರಲಿಲ್ಲ, ಸಿಂಗಾಪೂರ್ ಸಹ ಮಾಡಿಲ್ಲ. ನಗರಸಭೆ ತೀರಾ ಅಧ್ವಾನವಾಗಿರುವುದರಿಂದ ಮೇಜರ್ ಸರ್ಜರಿ ಆಗಬೇಕಾಗಿರುವುದರಿಂದ ಸೂಕ್ತ ಅಭ್ಯರ್ಥಿಗಳ ಅವಶ್ಯಕತೆಯಿದೆ ಎಂದರು.
ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ನಿಸಾರ್ ಅಹಮ್ಮದ್, ಜಿ.ಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ನಗರಸಭೆ ಅಧ್ಯಕ್ಷೆ ನಾಜೀಯಾ ಬಾಬಾಜಾನ್, ಮುಖಂಡರಾದ ಬೆಳಗಾನಹಳ್ಳಿ ವೆಂಕಟಮುನಿಯಪ್ಪ, ವೆಂಕಟಪತಿ, ಹನೀಫ್, ಹಾರೋಹಳ್ಳಿ ನಾರಾಯಣಸ್ವಾಮಿ, ಗೋಕುಲ್ ನಾರಾಯಣಸ್ವಾಮಿ, ಕುಮಾರ್, ಜಯದೇವ್, ಭಾರತಿ ಇನ್ನಿತರ ಮುಖಂಡರಿದ್ದರು.
ಕೋಲಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಸಾದ್ ಬಾಬು ನಿರೂಪಿಸಿದರು.