ಹಸು-ಕರುಗೆ ಮುಂಚೆ ಚಂಬು ತಂದ ವರ್ತೂರ್: ಮುನಿಯಪ್ಪ ವ್ಯಂಗ್ಯ
ಕೋಲಾರ: ಸಚಿವ ವರ್ತೂರ್ ಪ್ರಕಾಶ್ ಅವರು ಯರಗೋಳ್ ಯೋಜನೆ ಆರಂಭಕ್ಕೆ ಮುನ್ನವೇ ಪೈಪ್ಲೈನ್ ಕಾಮಗಾರಿ ನಡೆಸಿದ್ದು, ಹಸು-ಕರುಗೆ ಮುಂಚೆ ಚಂಬು ತಂದಂತಾಗಿದೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ವ್ಯಂಗ್ಯವಾಡಿದರು.
ತಮ್ಮ ನಿವಾಸದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯರಗೋಳ್ ಯೋಜನೆಗೆ ಸಂಬಂಧಿಸಿದ ಅಣೆಕಟ್ಟೆ ನಿರ್ಮಾಣ ಮಾಡಿದ ನಂತರ ಪೈಪ್ಲೈನ್ ಕಾಮಗಾರಿ ಅಳವಡಿಸಿದ್ದರೆ ಅದಕ್ಕೆ ಅರ್ಥವಿರುತ್ತಿತ್ತು. ಆದರೆ, ಸಚಿವರು ಹಸು ತಂದು ಅದು ಕರು ಹಾಕಿ ಹಾಲು ನೀಡುವ ಮುನ್ನವೇ ಚಂಬು ತಂದಿದ್ದಾರೆಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.
ವರ್ತೂರ್ ಪ್ರಕಾಶ್ ಅವರ ತಂದೆ ರಾಮಸ್ವಾಮಿ ಕಾರ್ಮಿಕ ಮುಖಂಡರಾಗಿ, ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ದೊಡ್ಡ ವ್ಯಕ್ತಿತ್ವ ಹೊಂದಿದ್ದರು. ಆದರೆ, ವರ್ತೂರ್ ಪ್ರಕಾಶ್ ತಂದೆಗೆ ತಕ್ಕ ಮಗನಾಗಿಲ್ಲ. ರಾಮಸ್ವಾಮಿ ಪೂರ್ವಕ್ಕೆ ನಿಂದರೆ, ಮಗ ಪಶ್ಚಿಮಕ್ಕೆ ನಿಲ್ಲುತ್ತಾರೆ. ಇಂತಹ ಅಸಾಮಿ ಕೋಲಾರದ ಶಾಸಕರಾಗಿರುವುದು ನಮ್ಮೆಲ್ಲರ ದೌರ್ಭಾಗ್ಯ ಎಂದು ನುಡಿದರು.
ಇದಕ್ಕೂ ಮುನ್ನ ಮಾತನಾಡಿದ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರು, ವರ್ತೂರ್ ಪ್ರಕಾಶ್ ಕೋಲಾರ ಜನತೆಗೆ ಪರಿಚಯವೇ ಇರಲಿಲ್ಲ. ಜಿ.ಪಂ ಸದಸ್ಯರಾಗಿದ್ದ ಇವರು ಸಮಾಜ ಸೇವೆಗಾಗಿ ಇಲ್ಲಿಗೆ ಬಂದು ನಾನೊಬ್ಬ ಕಾಂಗ್ರೆಸ್ಸಿನ ಕಾರ್ಯಕರ್ತ ಎಂದು ಪಕ್ಷದ ನಾಯಕರ ಭಾವಚಿತ್ರವಿರುವ ಕರಪತ್ರಗಳ ಮೂಲಕ ಬಿಂಬಿಸಿಕೊಂಡಿದ್ದರಿಂದ ಕಾರ್ಯಕರ್ತರು ನಿಜ ಎಂದು ನಂಬಿ ಶಾಸಕನನ್ನಾಗಿ ಮಾಡಿದ್ದಾರೆ ಎಂದರು.