ಕಾಂಗ್ರೆಸ್, ಜೆಡಿಎಸ್, ಬಿಜೆಪಿಗೆ ಭವಿಷ್ಯದ ಭಯ
ಅಸ್ತಿತ್ವ ಉಳಿವಿಗೆ ವರ್ತೂರು ಬಣ ಕಸರತ್ತು ್ಣ ಪೌರ ಸಂಸ್ಥೆ ಚುನಾವಣೆ: ರಂಗೇರಿದ ರಾಜಕೀಯ
- ಪಾ.ಶ್ರೀ.ಅನಂತರಾಮ್
ಕೋಲಾರ: ಮಾರ್ಚ್ 7ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಜಿಲ್ಲೆಯ ಹಾಲಿ ಶಾಸಕರ ಪಾಲಿಗೆ ನುಂಗಲಾಗದ ಬಿಸಿ ತುಪ್ಪವಾಗಿದ್ದರೆ, ಮುಂಬರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವವರಿಗೆ ಒಲ್ಲದ ಅತಿಥಿ ಮನೆಗೆ ಬಂದಂತಾಗಿದೆ.
ಜಿಲ್ಲೆಯ ಮೂವರು ಬಿಜೆಪಿ ಶಾಸಕರು, ಕಾಂಗ್ರೆಸ್, ಜೆಡಿಎಸ್ನ ತಲಾ ಒಬ್ಬರು ಹಾಗೂ ಪಕ್ಷೇತರ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್ ಪ್ರಕಾಶ್ ತಮ್ಮ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಧಾನಸಭಾ ಚುನಾವಣೆಗೆ ಮುಂಚೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿರುವುದರಿಂದ ಶಾಸಕರು ತಮಗೆ ಬೇಕಾದ ಅಭ್ಯರ್ಥಿಗಳಿಗೆ ಬಿ.ಫಾರಂ ಕೊಡಿಸುವುದಕ್ಕೆ, ಬಂಡವಾಳ ಹಾಕಿ ಗೆಲ್ಲಿಸುವುದಕ್ಕೆ ಎಚ್ಚರವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗೇ ನೋಡಿದರೆ ಸಚಿವ ವರ್ತೂರ್ ಪ್ರಕಾಶ್ ಅವರಿಗೆ ಅಭ್ಯರ್ಥಿಗಳ ಆಯ್ಕೆ ಕಷ್ಟವೇನಿಲ್ಲ, ಈ ಹಿಂದಿನ ಚುನಾವಣೆಯಲ್ಲಿ ತಮ್ಮ ಬಣದಿಂದ ಗೆದ್ದ 16 ಮಂದಿ ಸದಸ್ಯರಲ್ಲಿ 11ಮಂದಿಗೆ ಮತ್ತೆ ಅವಕಾಶ ನೀಡುವ ತಯಾರಿ ನಡೆಸಿದ್ದಾರೆ.
ಕೆಲವರ ಕೈಬಿಡುವ ಸಾಧ್ಯತೆ: ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿಯಬೇಕಾದರೆ ಕನಿಷ್ಠ ಇನ್ನು 9 ರಿಂದ 10 ಮಂದಿ ಸದಸ್ಯರ ಅಗತ್ಯವಿದ್ದು, ಈ ಹಿಂದೆ ಗೆದ್ದ ಕೆಲ ಸದಸ್ಯರ ವಿರುದ್ಧ ಸಾರ್ವಜನಿಕರಲ್ಲಿ ಅಸಮಾಧಾನ, ಆಕ್ರೋಶ ಇರುವುದರಿಂದ ಅಂತಹ ಸದಸ್ಯರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಿದಲ್ಲಿ ಮುಖಭಂಗ ಅನುಭವಿಸಬೇಕಾಗುತ್ತದೆ ಎಂಬ ಭಯದಿಂದ ಕೆಲವು ವಾರ್ಡುಗಳಲ್ಲಿ ಕಾಂಗ್ರೆಸ್, ಜೆಡಿಎಸ್ಗಿಂತ ಉತ್ತಮವಾದ ಅಭ್ಯರ್ಥಿಗಳನ್ನು ನಿಲ್ಲಿಸುವುದಕ್ಕೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಖಾಸಗಿ ಗುಪ್ತಚಾರರನ್ನು ನೇಮಕ ಮಾಡಿ ಅವರಿಂದ ವರದಿ ತರಿಸಿಕೊಂಡು ಫೆ.22ಕ್ಕೆ ಅಂತಿಮ ಪಟ್ಟಿ ಪ್ರಕಟಿಸಲು ಉದ್ದೇಶಿಸಿದ್ದಾರೆ ಮಾತ್ರವಲ್ಲ, ಕನಿಷ್ಠ 4 ಮಂದಿ ಅಲ್ಪಸಂಖ್ಯಾತರನ್ನು ಗೆಲ್ಲಿಸಿಕೊಳ್ಳುವುದಕ್ಕೆ ತೀವ್ರ ಕಸರತ್ತು ನಡೆಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ವರ್ತೂರ್ ಜತೆಗಿದ್ದ ಅಲ್ಪಸಂಖ್ಯಾತರ ಮುಖಂಡರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಇದು ಮುಂದಿನ ತಮ್ಮ ಚುನಾವಣೆ ಮೇಲೆ ಪರಿಣಾಮ ಬೀರಬಹುದೆಂಬ ಕಾರಣದಿಂದ ಸಚಿವರು ತಮ್ಮದೇ ರಾಜಕೀಯ ಲೆಕ್ಕಾಚಾರ ಆರಂಭಿಸಿದ್ದು, ನಗರಸಭೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಯಾರಿಗೆ ಟಿಕೆಟ್ ಸಿಗುತ್ತದೆ, ಯಾರು ಅತೃಪ್ತರಾಗಿ ಬಂಡಾಯ ಸಾರುತ್ತಾರೋ ನೋಡಿಕೊಂಡು ಫೆ.22ರ ಸಂಜೆಯೊಳಗೆ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಉದ್ದೇಶಿಸಿದ್ದು ಕೆಲ ಮಂದಿ ಅಪ್ತರೊಂದಿಗೆ ಕೋಲಾರ ನಗರದ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.
ಜೆಡಿಎಸ್ಗೆ ಪ್ರತಿಷ್ಠೆ ಪ್ರಶ್ನೆ: ಕೋಲಾರ ನಗರಸಭೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಮಾಜಿ ಸಚಿವ ಕೆ.ಶ್ರೀನಿವಾಸಗೌಡರು ಈಗಾಗಲೇ ವಿವಿಧ ವಾರ್ಡುಗಳ ಮುಖಂಡರ ಜತೆ ಸಮಾಲೋಚನೆ ನಡೆಸಿ, ವರ್ತೂರ್ ಪ್ರಕಾಶ್ ಬಣದ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಪಕ್ಷಾಂತರ ತಡೆಯಲು ಕ್ರಮ: ಚುನಾವಣೆಯಲ್ಲಿ ಗೆದ್ದ ನಂತರ ಹಣ ಮತ್ತು ಜಾತಿಯ ಕಾರಣದಿಂದ ಮರ ಕೋತಿ ರೀತಿಯಲ್ಲಿ ಜಿಗಿಯುವ ಸದಸ್ಯರಿಗೆ ಕಡಿವಾಣ ಹಾಕಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಬಿ.ಫಾರಂ ನೀಡುವಾಗಲೇ ಪಕ್ಷಾಂತರ ಮಾಡುವುದಿಲ್ಲವೆಂದು ಕರಾರು ಪತ್ರಕ್ಕೆ ಸಹಿ ಮಾಡಿಸಿಕೊಳ್ಳುವುದು,ಪ್ರಮಾಣ, ಪ್ರತಿಜ್ಞೆ ಮಾಡಿಸಿಕೊಳ್ಳುವುದು ಸೇರಿದಂತೆ ಇನ್ನಿತರ ಕ್ರಮಗಳಿಗೆ ಮುಂದಾಗಿದ್ದಾರೆ.
ಬಿಜೆಪಿಯವರು ಈ ಬಾರಿ ಮಾನ ಉಳಿಸಿಕೊಳ್ಳುವುದಕ್ಕಾಗಿ ಕನಿಷ್ಠ 5 ಸ್ಥಾನಗಳಲ್ಲಿಯಾದರೂ ಗೆಲ್ಲಲೇಬೇಕೆಂಬ ಹಠದಿಂದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕಾಂಗ್ರೆಸ್ನಲ್ಲಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್, ಮಾಜಿ ಸಚಿವ ನಿಸಾರ್ ಅಹಮ್ಮದ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಜಿಲ್ಲಾ ಸಮಿತಿ ಅಧ್ಯಕ್ಷ ಅನಿಲ್ಕುಮಾರ್ ಸೇರಿದಂತೆ ಹತ್ತಾರು ಮಂದಿ ಹಿರಿಯ ಮುಖಂಡರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿದ್ದಾರೆ.
ಇತ್ತ ಜೆಡಿಎಸ್ನಲ್ಲಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೇರಿದಂತೆ ಅನೇಕರು ನಗರಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದರೆ ವರ್ತೂರ್ ಬಣದಲ್ಲಿ ಸಚಿವ ವರ್ತೂರ್ ಪ್ರಕಾಶ್ ಅವರೇ ಪ್ರಶ್ನಾತೀತ ನಾಯಕರಾಗಿದ್ದು ಕಾಂಗ್ರೆಸ್, ಜೆಡಿಎಸ್ ವಾಲುಗಳನ್ನು ಈ ಬಾರಿ ಹೇಗೆ ಎದುರಿಸುತ್ತಾರೆಂಬುದು ಕುತೂಹಲ ಮೂಡಿಸಿದೆ.