ಮತದಾರ ಪಟ್ಟಿಯಲ್ಲಿ ಲೋಪ: ಶಿರಸ್ತೇದಾರ ಅಮಾನತಿಗೆ ಆಗ್ರಹ
ಶಿಡ್ಲಘಟ್ಟ: ಮತದಾರರ ಪಟ್ಟಿಯಲ್ಲಿ ಲೋಪದೋಷವಾಗಿರುವುದನ್ನು ಖಂಡಿಸಿ ಕರ್ತವ್ಯ ಲೋಪ ಎಸಗಿದ್ದರೆನ್ನಲಾದ ಚುನಾವಣೆ ಶಾಖೆಯ ಶಿರಸ್ತೇದಾರ ಪ್ರಕಾಶ್ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ವಿವಿಧ ಪಕ್ಷಗಳ ಮುಖಂಡರು ಮತ್ತು ಮತದಾರರು ಚುನಾವಣೆ ಶಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಚುನಾವಣಾಧಿಕಾರಿಗಳು ಹಾಗೂ ಚುನಾವಣೆ ಶಾಖೆಯ ಶಿರಸ್ತೇದಾರ ಪ್ರಕಾಶ್ ಉದ್ದೇಶಪೂರ್ವಕವಾಗಿ ಕೆಲವು ವಾರ್ಡುಗಳಲ್ಲಿನ ಹಳೆಯ ಮತದಾರರ ಪಟ್ಟಿಯಲ್ಲಿರುವ ಸುಮಾರು 500 ಮತದಾರರ ಹೆಸರುಗಳೇ ಇಲ್ಲದಂತೆ ಮಾಡಿದ್ದಾರೆ ಎಂದು ಆರೋಪಿಸಿ ನಾಗರೀಕರು ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್ ರಮೇಶ್, ಶಿರಸ್ತೇದಾರ ಪ್ರಕಾಶ, ಪುರಸಭೆಯ ಮುಖ್ಯಾಧಿಕಾರಿ ಹನುಮಂತೇಗೌಡರವರಿಗೆ ದಿಗ್ಬಂಧನ ಹಾಕಲು ಯತ್ನಿಸಿದರು. ಇದೇ ವೇಳೆಯಲ್ಲಿ ಕರ್ತವ್ಯದಲ್ಲಿದ್ದ ಸಹಾಯಕ ಆರಕ್ಷಕ ಉಪನಿರೀಕ್ಷಕ ಇಸ್ಮಾಯಿಲ್, ಶ್ರೀನಿವಾಸ್ ಮತ್ತು ಸಿಬ್ಬಂದಿ ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಈ ಮುಂಚೆ ತಾಲೂಕು ಕಚೇರಿಯಿಂದ ನೀಡಿರುವ ಮತದಾರರ ಪಟ್ಟಿಯಲ್ಲಿ ಹೆಸರುಗಳು ಹಾಗೂ ಭಾವಚಿತ್ರಗಳು ಇದ್ದವು. ಹೊಸದಾಗಿ ಪರಿಷ್ಕರಣೆಯಾದ ಮತದಾರರ ಪಟ್ಟಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಮಂದಿಯ ಹೆಸರು ಕಣ್ಮರೆಯಾಗಿವೆ, ಚುನಾವಣಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ರೀತಿಯಾಗಿದ್ದು, ಮಾರ್ಚ್7 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸುಲಭವಾಗಿ ಜಯಗಳಿಸಲು ಕೆಲವರು ಮಾಡಿರುವ ಕುತಂತ್ರಗಳಿಗೆ ಬಲಿಯಾಗಿರುವ ಅಧಿಕಾರಿ ಈ ರೀತಿ ಮಾಡಿದ್ದಾರೆ. ಮತದಾರರ ದಿನಾಚರಣೆಯಲ್ಲಿ ತಹಶೀಲ್ದಾರರಿಂದ ವಿತರಣೆಯಾಗಿರುವ ಗುರುತಿನ ಚೀಟಿಯಲ್ಲಿರುವ ಮತದಾರರ ಹೆಸರುಗಳು ಮಾಯವಾಗಿವೆ. ಇದಕ್ಕೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.