ಲಿಂಗ ಅಲ್ಪಸಂಖ್ಯಾತರ ಸಮಸ್ಯೆ ಬಗ್ಗೆ ಚರ್ಚೆ ಅಗತ್ಯ: ಸುರೇಖಾ ಅಭಿಮತ
ಚಿಕ್ಕಬಳ್ಳಾಪುರ: ನಿಸರ್ಗ ಸೊಸೈಟಿಯ ಎರಡನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಸಿಟಿಜನ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಿಂಗ ಅಲ್ಪಸಂಖ್ಯಾತರ ಸಮಸ್ಯೆ ಮತ್ತು ಅಗತ್ಯತೆಗಳ ಬಗ್ಗೆ ಚರ್ಚಿಸಲಾಯಿತು.ಇದರಲ್ಲಿ ಸುಮಾರು 200 ಕ್ಕೂ ಹೆಚ್ಚು ಲಿಂಗ ಅಲ್ಪಸಂಖ್ಯಾತರು ಭಾಗವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸುರೇಖಾ, ಈ ಹಿಂದೆ ಲಿಂಗ ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಶೋಷಣೆಗೆ ಗುರಿಯಾಗುತ್ತಿದ್ದರು. ಆದರೆ, ಈಗ ಸರ್ಕಾರ ಅವರ ಹಿತಾಸಕ್ತಿಯನ್ನು ಕಾಪಾಡಲು ಮುಂದೆ ಬಂದಿದ್ದು ಕಾನೂನಿನ ಪ್ರಕಾರ ನ್ಯಾಯ ಒದಗಿಸಲು ಕಾರ್ಯೋನ್ಮುಖವಾಗಿದೆ ಎಂದರು. ದೈಹಿಕ ಬೆಳವಣಿಗೆಯಲ್ಲಿ ಲೋಪಗಳಿಂದ ಸಮಸ್ಯೆಗಳನ್ನು ಅನುಭವಿಸುತ್ತಿರುವ ಲಿಂಗ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವಂತಹುದು ನಿಲ್ಲಬೇಕು. ಸಮಾಜದಲ್ಲಿ ಎಲ್ಲರಂತೆ ಅವರನ್ನು ಸಮಾನವಾಗಿ ಕಾಣಬೇಕು. ಮುಕ್ತವಾಗಿ ಸಮಾಜದಲ್ಲಿ ಬಾಳುವಂತಾಗಲು ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ಕೋರಿದರು. ನಿಸರ್ಗ ಸೊಸೈಟಿಯ ಅಧ್ಯಕ್ಷ ರಾಜು ಮಾತನಾಡಿ, ಜನರಿಗೆ ಅನುಕೂಲವಾಗುವಂತಹ ಸೇವಾ ಕಾರ್ಯಕ್ರಮ ಕೈಗೊಂಡು ಬರುತ್ತಿದೆ ಎಂದರು.
ರಮೇಶ್, ಗಂಗಾಧರ್, ಉಷಾಕಿರಣ್, ಅಕ್ಕಯ್ಯಮ್ಮ, ಗುರು ಕಿರಣ್ ಇದ್ದರು.