'ಸಮುದಾಯ ಭವನಕ್ಕೆ ನೆರವು' (ಸುದ್ದಿ ಸಂಕ್ಷೇಪ )
ಗೌರಿಬಿದನೂರು: ಬ್ರಾಹ್ಮಣ ಸಮುದಾಯದವರು ಸ್ವಾಭಿಮಾನಿಗಳು. ತಮ್ಮ ಕೆಲಸದಲ್ಲಿ ಆಸಕ್ತಿ ಉಳ್ಳವರು. ಹಿಂದೆ ಇವರು ಸಮಾಜಕ್ಕೆ ಮಾರ್ಗದರ್ಶಿಗಳಾಗಿದ್ದರು ಎಂದು ಶಾಸಕ ಶಿವಶಂಕರರೆಡ್ಡಿ ಹೇಳಿದರು. ಪಟ್ಟಣದ ಶಾರದಾ ಮಂದಿರ ಆವರಣದಲ್ಲಿ 1.05 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ತಮ್ಮ ಶಾಸಕರ ನಿಧಿಯಿಂದ ಈಗಾಗಲೇ 3 ಲಕ್ಷ ಬಿಡುಗಡೆ ಮಾಡಲಾಗಿದೆ. ಇನ್ನುಳಿದ 2 ಲಕ್ಷಗಳನ್ನು ಕೆಲಸದ ಪ್ರಗತಿ ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು ಎಂದರು. ಸಂಸದ ವೀರಪ್ಪ ಮೊಯಿಲಿ ಅವರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದಲೂ 5 ಲಕ್ಷ ನೆರವು ಕಲ್ಪಿಸುವ ಭರವಸೆ ನೀಡಿದರು. ತಾ.ಪಂ. ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧಕ್ಷ ಅಶ್ವತ್ಥನಾರಾಯಣರಾವ್ ಮಾತನಾಡಿದರು. ಸಮುದಾಯ ಭವನ ನಿರ್ಮಾಣಕ್ಕೆ ದಾನಿಗಳು ಸಹಕರಿಸಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ರಮೇಶ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡೈರಿ ರಮೇಶ್, ಡಾ.ಶಶಿಧರ್, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮುಂತಾದವರು ಹಾಜರಿದ್ದರು.
ಇಂದು ಪವಮಾನ ಹೋಮ
ಮಾಲೂರು: ತಾಲೂಕು ಬ್ರಾಹ್ಮಣರ ಸಂಘದ ವತಿಯಿಂದ ಫೆ.19ರಂದು ಶ್ರೀಮಧ್ವ ನವಮಿ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಬ್ರಾಹ್ಮಣರ ರಸ್ತೆಯ ರಾಘವೇಂದ್ರ ಮಠದಲ್ಲಿ ಮಧ್ವ ನವಮಿ ಪ್ರಯುಕ್ತ ಮಂಗಳವಾರ ಪವಮಾನ ಹೋಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪ್ರಾಕಾರೋತ್ಸವ, ಶ್ರೀಗಳ ಭಜನೆ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ಆಸ್ತಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಬ್ರಾಹ್ಮಣರ ಸಂಘದ ಶೇಖರ್ ತಿಳಿಸಿದ್ದಾರೆ.
'ವಿದ್ಯೆ ವಿದ್ಯಾರ್ಥಿಗಳ ಆಯುಧವಾಗಲಿ'
ಗೌರಿಬಿದನೂರು: ಹೋಬಳಿ ಕೇಂದ್ರದ ಸರ್ಕಾರಿ ಪ್ರೌಢಶಾಲೆ ವಾರ್ಷಿಕೋತ್ಸವ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಗೌರಿಬಿದನೂರು ಆಚಾರ್ಯ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವರಾಹ ಮೂರ್ತಿ ಉದ್ಘಾಟಿಸಿ ಮಾತನಾಡಿದರು. ವಿದ್ಯೆ ವಿದ್ಯಾರ್ಥಿಗಳ ಬದುಕಿನ ಮುಖ್ಯ ಆಯುಧ. ಅದನ್ನು ಸಂಪಾದಿಸಲು ಶಿಸ್ತು, ಶ್ರಮ ವಹಿಸಿ ವಿದ್ಯೆ ಕಲಿಕೆಯಲ್ಲಿ ಆಸಕ್ತಿ ವಹಿಸಬೇಕು. ಅಭ್ಯಾಸದಲ್ಲಿ ನಿರತರಾಗಿ ಎಂದರು. ಮುಖಂಡ ಜೆ.ವಿ.ಹನುಮೇಗೌಡ, ಜಿಪಂ ಮಾಜಿ ಸದಸ್ಯ ಪಿ.ಎನ್. ಜಗನ್ನಾಥ್, ಮುಖ್ಯಶಿಕ್ಷಕ ಎಸ್.ವೆಂಕಟೇಶ್, ಗ್ರಾಪಂ ಗ್ರಾಪಂ ಅಧ್ಯಕ್ಷ ದಾವುದ್ ಘಾನ್, ಶಿಕ್ಷಕ ಎನ್.ಕೆ. ಕೆಂಚವೀರ್ ಹಾಗೂ ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.