ಸೋಲಿನ ಭಯದಿಂದ ವರ್ತೂರು ಹತಾಶ
ಸಚಿವರ ವಿರುದ್ಧ ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಆಕ್ರೋಶ
ಕೋಲಾರ: ಸಚಿವ ವರ್ತೂರ್ ಪ್ರಕಾಶ್ ಅವರು ಮುಂದಿನ ಚುನಾವಣೆಯಲ್ಲಿ ಸೋಲುವುದು ಖಚಿತ ಆಗಿರುವುದರಿಂದ, ವಿವಿಧ ಕಡೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಸಮಾವೇಶ ನಡೆಸಿ ಜನತೆಯನ್ನು ವಂಚಿಸುವ ಸಂಚು ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಕೆ.ಶ್ರೀನಿವಾಸಗೌಡ ಆರೋಪಿಸಿದ್ದಾರೆ.
ತಾಲೂಕಿನ ಗದ್ದೇಕಣ್ಣೂರು ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ವರ್ತೂರ್ ಪ್ರಕಾಶ್ ಬಣ ತೊರೆದು ಜೆಡಿಎಸ್ ಸೇರಿದವರನ್ನು ಸ್ವಾಗತಿಸಿ ಅವರು ಮಾತನಾಡಿದರು.
ವರ್ತೂರ್ ಪ್ರಕಾಶ್ ನಿಜ ಬಣ್ಣ ಈಗಾಗಲೇ ಬಯಲಾಗಿದೆ. ಮುಂದಿನ ಚುನಾವಣೆಯಲ್ಲಿ ಸೋಲುವುದು ಖಚಿತ ಎಂದು ಗೊತ್ತಾಗಿರುವುದರಿಂದ ಅಕ್ರಮವಾಗಿ ಸಂಪಾದಿಸಿದ ಹಣದಲ್ಲಿ ಸಮಾವೇಶ ಮಾಡುತ್ತಿದ್ದಾರೆ ಎಂದು ಗುಡುಗಿದರು. ತಮ್ಮ ಕೆಲವು ತಪ್ಪು ನಿರ್ಧಾರಗಳಿಂದ ಕಳೆದ ಚುನಾವಣೆಯಲ್ಲಿ ಸೋತಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಅನುಭವದಲ್ಲಿ ಇದೇ ಮೊದಲ ಬಾರಿಗೆ ವರ್ತೂರ್ ಪ್ರಕಾಶ್ ರಂತಹ ಕೆಟ್ಟ ರಾಜಕಾರಣಿ ನೋಡುತ್ತಿದ್ದು, ಜನತೆಗೂ ಈಗ ತಮ್ಮ ತಪ್ಪಿನ ಅರಿವಾಗಿರುವುದರಿಂದ ಮುಂದಿನ ಚುನಾವಣೆಯಲ್ಲಿ ಈಗಿನ ಹಾಲಿ ಸಚಿವರು ಗಂಟು ಮೂಟೆ ಕಟ್ಟಿಕೊಂಡು ಕ್ಷೇತ್ರ ಖಾಲಿ ಮಾಡುವುದು ಖಚಿತ ಎಂದು ಭವಿಷ್ಯ ನುಡಿದರು.
ಗುತ್ತಿಗೆ ಮತ್ತಿತರೆ ವ್ಯವಹಾರಗಳಲ್ಲಿ ಕಮಿಷನ್ಗಾಗಿ ನಡೆಸಿದ ದೊಂಬರಾಟ, ಗೂಂಡಾಗಿರಿಯನ್ನೆಲ್ಲಾ ಜನ ಗಮನಿಸಿದ್ದಾರೆ. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸಹಾಯದಿಂದ ಗೆದ್ದವರು ಅವರ ವಿರುದ್ಧವೇ ತೊಡೆತಟ್ಟಿದ್ದನ್ನು ನೋಡಿ ಜನರು ರೋಸಿ ಹೋಗಿದ್ದಾರೆ. ಈಗ ಮತ್ತೆ ಅದೇ ಪಟಲಾಂನನ್ನು ತಂದು ಕೂರಿಸುವ ಪ್ರಯತ್ನಕ್ಕೆ ವರ್ತೂರುಕೈ ಹಾಕಿದ್ದಾರೆ. ಇವರೇನಾದರು ಆಯ್ಕೆಯಾಗಿ ಬಂದರೆ ಇಡೀ ನಗರಸಭೆಯನ್ನೇ ಸರ್ವನಾಶ ಮಾಡುತ್ತಾರೆ ಎಂದು ಕಿಡಿಕಾರಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಜಿ.ಪಂ.ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಎಪಿಎಂಸಿ ಅಧ್ಯಕ್ಷ ಈರಪ್ಪ, ತಾಲೂಕು ಅಧ್ಯಕ್ಷ ಮೂರಂಡಹಳ್ಳಿ ಗೋಪಾಲ್, ಅರಹಳ್ಳಿ ಅಶ್ವಥ್,ಗ್ರಾಪಂ ಅಧ್ಯಕ್ಷ ಹರೀಶ್ಗೌಡ, ಗದ್ದೇ ಕಣ್ಣೂರು ಬಾಬಣ್ಣ, ಎನ್.ಶ್ರೀನಿವಾಸ್ ,ಮುಖಂಡರಾದ ಇಬ್ರತ್ತುಲ್ಲಾಖಾನ್, ಅಫ್ರೋಜ್ ಪಾಷ, ಗ್ರಾಪಂ ಸದಸ್ಯ ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು.