ಜಿಪಂ ಎಂಜಿನಿಯರ್‌ಗೆ ನೀರಿಳಿಸಿದ 'ಲೋಕಾ' ಅಧಿಕಾರಿ
ಗುಡಿಬಂಡೆ: ಸ್ಥಳೀಯ ಜಿ.ಪಂ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಾಮಣ್ಣನವರಿಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕೃಷ್ಣನಾಯಕ್ ಸಭೆಯಲ್ಲಿ ಎಚ್ಚರಿಕೆ ನೀಡಿದ ಪ್ರಸಂಗ ನಡೆಯಿತು.
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮೇಲ್ಕಂಡ ಅಧಿಕಾರಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುವಂತೆ ತಿಳಿಸಿದರು.
ಸಾರ್ವಜನಿಕರು ಕಚೇರಿ ಕೆಲಸದ ನಿಮಿತ್ತ ಬಂದಾಗ ಅಧಿಕಾರಿಗಳು ವಿಳಂಬ ಮಾಡದೇ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು. ಭ್ರಷ್ಟಾಚಾರ ಮತ್ತು ಅವ್ಯವಹಾರ ಕಂಡು ಬಂದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ದೂರು ನೀಡುವ ಅರ್ಜಿದಾರರಿಗೆ ಬೆದರಿಕೆ ಸಾಕ್ಷ್ಯ ನಾಶ ಪಡಿಸುವಿಕೆ ಮುಂತಾದ ಕಣತ್ಯಗಳನ್ನು ಎಸಗುವ ಅಧಿಕಾರಿಗಳಿಗೆ ತೊಂದರೆ ತಪ್ಪಿದ್ದಲ್ಲ ಎಂದು ನುಡಿದ ಅವರು ಸರ್ಕಾರ ಜಾರಿಗೆ ತಂದಿರುವ ಸಕಾಲ, ಮಾಹಿತಿ ಹಕ್ಕು ನಿಯಮಗಳು ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಬಲ್ಲವು ಎಂದು ಅಭಿಪ್ರಾಯಪಟ್ಟರು.
ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಇಂದ್ರೇಶ್ ಮಾತನಾಡಿ ಆಪಾದನೆಗಳಿಂದ ಹೊರತಾಗಿ ಒತ್ತಡಗಳಿಗೆ ಮಣಿಯದೆ ಸೇವೆ ಸಲ್ಲಿಸಿದಾಗ ಜನರ ಮನ್ನಣೆಗೆ ಅಧಿಕಾರಿಗಳು ಪಾತ್ರರಾಗಲು ಸಾಧ್ಯ ಎಂದರು.
ಹಿಂದಿನ ಸಭೆಗಳಲ್ಲಿ ಸಾರ್ವಜನಿಕರು ನೀಡಿದ ಕುಂದುಕೊರತೆ ಅರ್ಜಿಗಳಿಗೆ ಶೀಘ್ರ ಪರಿಹಾರ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ತಾಲೂಕಿನ ಪುರದಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗ ಅತಿಕ್ರಮಿಸಿಕೊಂಡು ದೇವಸ್ಥಾನ ನಿರ್ಮಿಸಲಾಗಿದ್ದು ತೆರವುಗೊಳಿಸುವಂತೆ ಇ.ಒ.ಗೆ ಸೂಚಿಸಲಾಯಿತು. ತಮ್ಮ ನಿವೇಶನವನ್ನು ಬೇರೊಬ್ಬರು ಹೆಸರಿನ ಖಾತೆ ಮಾಡಿರುವ ಬಗ್ಗೆ ಪಟ್ಟಣದ ಫಯಾಜ್ ಖಾನ್ ಎಂಬುವವರು ನೀಡಿದ್ದ ಅರ್ಜಿ ವಿಲೇವಾರಿ ಬಗ್ಗೆ ಗಮನಹರಿಸುವಂತೆ ಪ.ಪಂ ಮುಖ್ಯಾಧಿಕಾರಿಗೆ ಸೂಚಿಸಿದ ಲೋಕಾಯುಕ್ತ ಅಧಿಕಾರಿ, ತಾಲೂಕಿನಲ್ಲಿ ಸಮುದಾಯ ಭವನಗಳ ಹೆಸರಿನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ದೂರು ಅರ್ಜಿಎ ನೀಡಿದ ತಿಮ್ಮಾರೆಡ್ಡಿಯವರಿಗೆ ಸೂಕ್ತ ಮಾಹಿತಿ ಒದಗಿಸುವಂತೆ ಜಿ.ಪಂ. ಎ.ಇ.ಇ ಜ್ಯೋತಿಪ್ರಕಾಶ್‌ಗೆ ತಿಳಿಸಿದರು.
ಸಭೆಯಲ್ಲಿ ರೇಷ್ಮೆ, ತೋಟಗಾರಿಕೆ, ಜಲಾನಯನ, ಅರಣ್ಯ, ಕೃಷಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.