ಅಮೂಲ್ಯ ಮತ ಮಾರದಿರಿ, ಯೋಗ್ಯರನ್ನೇ ಆರಿಸಿ
ಚಿಕ್ಕಬಳ್ಳಾಪುರ: ಎಚ್ಚರ ನಿಮ್ಮ ಮತ ಮಾರಿಕೊಳ್ಳದಿರಿ, ಹಾಗೆಯೇ ಮೋಸ ಮಾಡಬೇಡಿ, ಸ್ವತಃ ಮೋಸ ಹೋಗದಿರಿ. ಒಳ್ಳೆಯವರನ್ನು ಮಾತ್ರ ಆಯ್ಕೆ ಮಾಡಿ. ಈಗಾಗಲೇ ಚುನಾವಣೆಯಲ್ಲಿ ಗೆದ್ದು ಬದ್ದ ಕೆಲವರ ನಿರ್ಲಕ್ಷ್ಯದ ಫಲವಾಗಿ ಜಿಲ್ಲೆಯಲ್ಲಿ ಅಭಿಛಿದ್ಧಿ ಯಕ್ಕುಟ್ಟಿ ಹೋಗುತ್ತಿದೆ. ಹೀಗೆ ಮುಂದುವರೆಯಲು ಕಾರಣರಾಗಬೇಡಿ. ಆ ನಂತರ ತೆಗಳಿಕೊಳ್ಳದಿರಿ.
ಇದು ಜಿಲ್ಲೆಯ ಹಿರಿಯ ನಾಗರಿಕರ ವೇದಿಕೆ ಮತದಾರರಿಗೆ ನೀಡಿರುವ ಕರೆ. ಈ ಮೂಲಕ ಮತದಾರರನ್ನು ಎಚ್ಚರಿಸುವ ಕೆಲಸವನ್ನು ವೇದಿಕೆ ಮಾಡಿದೆ. ಸಂವಿಧಾನವು ಮತದಾನದ ಹಕ್ಕಿನ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ. ತಮಗೆ ಸೂಕ್ತ ವ್ಯಕ್ತಿ ಆಯ್ಕೆ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಸಹಕರಿಸಲಿ, ಉತ್ತಮರು ಆಯ್ಕೆಯಾಗಲಿ ಎಂಬ ಉದ್ದೇಶವನ್ನು ಹೊಂದಿದೆ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ನೀಡಿರುವ ಪ್ರಮುಖ ಕರ್ತವ್ಯವಾದ ಮತದಾನ ಮಾಡುವುದನ್ನು ನ್ಯಾಯಯುತವಾಗಿ ನಿರ್ವಹಿಸಬೇಕಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ಸಂದರ್ಭದಲ್ಲಿ ಮತದಾರ ಕೊಂಚ ಎಚ್ಚರ ತಪ್ಪಿ ನಡೆದುಕೊಂಡರು ಸಹ ಅಧಿಕಾರದ ಚುಕ್ಕಾಣಿಯು ಭ್ರಷ್ಟಾಚಾರಿಗಳ ಪಾಲಾಗುತ್ತದೆ. ಅಭಿವೃದ್ಧಿಯೂ ಮರೀಚಿಕೆಯಾಗುವುದಲ್ಲದೇ ಅಧಿಕಾರದ ದುರ್ಬಳಕೆಯಾಗುತ್ತದೆ. ದೇಶದ ಸಂಪತ್ತು ಉಳ್ಳವರ ಪಾಲಾಗಿ ಬಡ ಜನರು ಬಡಜನರಾಗಿಯೇ ಉಳಿಯಬೇಕಾಗುತ್ತದೆ ಎನ್ನುವುದನ್ನು ಸಾರಿ ಹೇಳಿದರು.
ನಗರ ಅದ್ವಾನ: ನಗರದ ಸಿಟಿಜನ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಾನ ಮನಸ್ಕರ ನಾಗರಿಕರ ಬಳಗ ಮತ್ತು ಹಿರಿಯ ನಾಗರಿಕರ ವೇದಿಕೆ ಕಳೆದ ವರ್ಷಗಳಿಂದ ಅಭಿವೃದ್ಧಿಯಲ್ಲಾಗಿರುವ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದರು. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಐದು ವರ್ಷಗಳಾದರೂ ಸಹ ಜಿಲ್ಲಾ ಕೇಂದ್ರ ಅಭಿವೃದ್ಧಿಯನ್ನು ಸಾಧಿಸಿಲ್ಲ. ಸರಿಯಾಗಿ ರಸ್ತೆಯಿಲ್ಲ. ಕುಡಿಯಲು ನೀರಿನ ಸಮಸ್ಯೆ, ಧೂಳು ಮತ್ತು ಕೆಸರಿನ ಸಮಸ್ಯೆ, ಬೀದಿ ದೀಪಗಳು ಸರಿಯಾಗಿ ಉರಿಯುವುದಿಲ್ಲ. ಸಮರ್ಪಕ ಕಸ ವಿಲೇವಾರಿಯ ಮಾತೇ ಇಲ್ಲ. ಚರಂಡಿಗಳು ಸರಿಯಾಗಿ ಇಲ್ಲ. ಸಾಕಷ್ಟು ಅನುದಾನ ಬಿಡುಗಡೆಯಾಗುತ್ತಿದ್ದರೂ ಸಹ ಅಭಿವೃದ್ಧಿ ಕೆಲಸಗಳಲ್ಲಿ ಪ್ರಗತಿಯೇನೂ ಸೂಕ್ತ ರೀತಿಯಲ್ಲಿ ಸಾಧನೆಯಾಗಿಲ್ಲ ಎಂದು ಕಿಡಿಕಾರಿದರು.
ಇಷ್ಟಕ್ಕೆಲ್ಲಾ ಕಾರಣ ಮತದಾರರಾದ ನಾವು ನಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದು. ಇದನ್ನು ಮತ್ತೆ ಪುನಾರವರ್ತನೆ ಮಾಡದೇ ಈ ಬಾರಿಯಾದರೂ ಎಚ್ಚೆತ್ತುಕೊಳ್ಳಬೇಕು. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಜನರ ಅಭಿವೃದ್ಧಿಯನ್ನು ಮರೆತು ನಡೆದುಕೊಳ್ಳುವವರಿಗೆ ತಕ್ಕ ಪಾಠ ಕಲಿಸಬೇಕು. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ತಮ್ಮ ಗೆಲುವಿಗಾಗಿ ಮನೆ ಮಠವನ್ನು ಮಾರಿಕೊಂಡು, ಕೈಯಲ್ಲಿದ್ದ ಕಾಸು ಕಳೆದುಕೊಂಡಂತಹವರು ಹೇಗೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಮುಂದಾಗುತ್ತಾರೆ. ಸಂಪಾದನೆ ಮಾಡಿಕೊಳ್ಳಲು ಕೊಳ್ಳೆ ಹೊಡೆಯದೇ ಇರುತ್ತಾರೆಯೇ. ಇದನ್ನರಿತು ಉತ್ತಮ, ಪ್ರಾಮಾಣಿಕ ಆಡಳಿತಕ್ಕಾಗಿ, ನಗರದ ಅಭಿವೃದ್ಧಿಗಾಗಿ ಉತ್ತಮರನ್ನೇ ಆಯ್ಕೆ ಮಾಡಿ ಎಂದು ಕರೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಿ. ನಾರಾಯಣಪ್ಪ, ಮುಖಂಡರಾದ ಚಿಕ್ಕರಾಮಯ್ಯ, ಯಲುವಳ್ಳಿ ಸೊಣ್ಣೆಗೌಡ, ಶ್ರೀನಿವಾಸರೆಡ್ಡಿ, ಎನ್. ಗಂಗರೆಡ್ಡಿ, ರಂಗನಾಥ, ಭಾಸ್ಕರ್ ರೆಡ್ಡಿ, ಕೆ.ಪಿ.ನಾರಾಯಣಸ್ವಾಮಿ, ಆನಂದ್, ಮೋಹನ್‌ಕುಮಾರ್ ಮುಂತಾದವರು ಉಪಸ್ಥಿತರಿದ್ದರು.