'ಎದೆಗೆ ಬಿದ್ದ ಅಕ್ಷರ'ದಲ್ಲಿ ಸಮಾನತೆಯ ಆಶಯ
ಮಾಲೂರು: ಇಂದಿನ ಸಮಾಜದಲ್ಲಿ ಕಾರುಣ್ಯ ಪ್ರಜ್ಞೆಯುಳ್ಳ ಸಾಹಿತ್ಯದ ಅವಶ್ಯಕತೆ ಇದೆ ಎಂದು ಕಿರುತೆರೆ ನಿರ್ದೇಶಕ ಬಿ.ಸುರೇಶ್ ಹೇಳಿದರು.
ಇಲ್ಲಿನ ಸಾರಂಗರಂಗ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ 'ದೇಸಿಯ ದರುವು' ಕಾರ್ಯಕ್ರಮದ ಅಂಗವಾಗಿ ಪದ್ಮಶ್ರೀ ದೇವನೂರು ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ ಎಂಬೋ ವಿಚಾರ ದರವು' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದನ್ನು ತ್ಯಜಿಸಬೇಕೆಂಬ ಆಶಯ ಹೊಂದಿರುವ ದೇವನೂರು ಮಹಾದೇವ ಅವರ 'ಎದೆಗೆ ಬಿದ್ದ ಅಕ್ಷರ' ಕಾದಂಬರಿ ಎಲ್ಲರಲ್ಲೂ ಸಮಾನತೆ ಸಾಧಿಸಬೇಕೆಂಬ ಆಶಯ ಹೊಂದಿದೆ ಎಂದರು.
ಗಾಂಧೀಜಿ, ಲೋಹಿಯಾ, ಅಂಬೇಡ್ಕರ್ ವಿಚಾರಧಾರೆಗಳು ಬುದ್ಧನ ಕಾರುಣ್ಯ ತತ್ವ ಎತ್ತಿತೋರಿಸುತ್ತಿದೆ. ಇಂದಿನ ಸಮಾಜದಲ್ಲಿ ದಲಿತ ಸಮುದಾಯವಲ್ಲದೇ ಎಲ್ಲ ಸಮುದಾಯಗಳಲ್ಲೂ ಬುದ್ಧ ಕಾರುಣ್ಯ ತತ್ವದ ಅವಶ್ಯಕತೆ ಇದೆ ಎಂದರು.
ಪ್ರೊ. ನಂಗಲಿ ಚಂದ್ರಶೇಖರ್ ಮಾತನಾಡಿ, ಜಾತಿಪ್ರಜ್ಞೆ ಇದ್ದವರಿಗೆ ಕಾರುಣ್ಯ ಪ್ರಜ್ಞೆ ಹುಟ್ಟಲು ಸಾಧ್ಯವಿಲ್ಲ. ಐಕ್ಯತೆ ಒಡೆಯಲು ಸಾಕಷ್ಟು ಜನ ಸಮಾಜದಲ್ಲಿ ಸಿಗುತ್ತಾರೆ. ಆದರೆ ಐಕ್ಯತೆ ಕಟ್ಟುವುದು ಹೇಗೆ ಎಂದು ತಿಳಿಸುವ ದೇವನೂರು ಮಹಾದೇವರ ಕೃತಿಗಳು ಇಂದಿಗೆ ಬೇಕಾಗಿದೆ. ಜಾತಿಯ ಜಟಕಾ ಬಂಡಿ ಹತ್ತಿರುವ ನಾವುಗಳು ಉಪಧಿಗಳಿಂದ ಪಾರಾಗಬೇಕಾಗಿದೆ ಎಂದರು.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಮಾತನಾಡಿದರು. ಹಾರೋಹಳ್ಳಿ ರವಿ, ಟಿ.ಯಲ್ಲಪ್ಪ, ಪದ್ಮಾಲಯ ನಾಗರಾಜ್ ಮಾತನಾಡಿದರು. ವಿ.ಬಾಲಕೃಷ್ಣ, ದೊಡ್ಡಮಲ್ಲೆ ರವಿ ಜನಪದ ಗೀತಗಾಯನ ನಡೆಸಿಕೊಟ್ಟರು. ವೆಂಕಟಾಪ ಸತ್ಯಂ, ವೇಣುಗೋಪಾಲ ವಹ್ನಿ, ಶ್ರೀಧರ್ ಇದ್ದರು. ಪಿಚ್ಚಳ್ಳಿ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.