ಕಾರ್ಮಿಕರ ಬಂದ್ಗೆ ಮಿಶ್ರ ಪ್ರತಿಕ್ರಿಯೆ
ಕೋಲಾರ: ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಲೆ ಏರಿಕೆ, ಖಾಸಗೀಕರಣ, ಹೊರಗುತ್ತಿಗೆ, ಕಾರ್ಮಿಕರ ಕಾನೂನು ಉಲ್ಲಂಘನೆ ಸೇರಿದಂತೆ ಹಲವು ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕೆಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದವು. ಮುಷ್ಕರದಲ್ಲಿ ಸಿಪಿಐಎಂ ಮತ್ತು ಸಿಐಟಿಯು ಸಂಘಟನೆಯ ಕೆಲ ಕಾರ್ಯಕರ್ತರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೋಲಾರದಿಂದ ಬಂಗಾರಪೇಟೆ ಮೂಲಕ ಬೆಂಗಳೂರಿಗೆ ತೆರಳುವ ಡೆಮೋ ರೈಲು ಗಾಡಿಯನ್ನು ಪ್ರತಿಭಟನಾಕಾರರು ಕೆಲ ನಿಮಿಷ ಸಾಂಕೇತಿಕವಾಗಿ ತಡೆದರು.
ನಂತರ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದು ಮುಷ್ಕರಕ್ಕೆ ಬೆಂಬಲ ನೀಡುವಂತೆ ಅಲ್ಲಿದ್ದ ಪ್ರಯಾಣಿಕರನ್ನು ಕೋರಿದರು. ಖಾಸಗಿ ಬಸ್ಸೊಂದನ್ನು ಡೂಮ್ಲೈಟ್ ವೃತ್ತದಲ್ಲಿ ತಡೆದ ಪ್ರತಿಭಟನಾಕಾರರು ಬಸ್ಸಿನ ಚಕ್ರದ ಗಾಳಿ ತೆಗೆದು ಸಂಚಾರ ಸ್ತಬ್ಧಗೊಳಿಸಿದರು.
ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಕೇಂದ್ರ ಸರ್ಕಾರ ವ್ಯಾಪ್ತಿಯ ಅಂಚೆ ಕಚೇರಿ, ಬಿಎಸ್ಎನ್ಎಲ್ ಕಚೇರಿಗಳನ್ನು ಬಂದ್ ಮಾಡಲಾಗಿತ್ತು. ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸಂಚಾರ ನಿಂತಿದ್ದರಿಂದ ಪ್ರಯಾಣಿಕರು ಪರದಾಡಿದರು. ಆಟೋಗಳ ಸಂಚಾರ ವಿರಳವಾಗಿತ್ತು.
ನಗರದ ಎಂ.ಜಿ.ರಸ್ತೆ, ಅಮ್ಮವಾರಿಪೇಟೆ, ಕಾಳಮ್ಮಗುಡಿ ಬೀದಿ, ದೊಡ್ಡಪೇಟೆ ಸೇರಿದಂತೆ ಅನೇಕ ಕಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.