ಅನೈತಿಕ ಸಂಬಂಧ: ಮಹಿಳೆ ಬಾವಿಗೆ ತಳ್ಳಿ ಕೊಲೆ
ಕೆಜಿಎಫ್: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಾವಿಗೆ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ರಾಬರ್ಟ್ಸನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ನಿವಾಸಿ ಬಾಬು ಎಂಬವರ ಪತ್ನಿ ಲಕ್ಷ್ಮೀ(35) ಕೊಲೆಯಾದವರು.
ಶಂಕರ್ ಎಂಬವರೊಂದಿಗೆ ಲಕ್ಷ್ಮೀ ಅನೈತಿಕ ಸಂಬಂಧ ಹೊಂದಿದ್ದರು. ಇದರಿಂದಾಗಿ ಪತಿ-ಪತ್ನಿ ಮಧ್ಯೆಆಗಾಗ ಜಗಳವಾಗುತ್ತಿತ್ತು. ಗಂಡ ಬಾಬು ಹಲವಾರು ಬಾರಿ ಪತ್ನಿ ಲಕ್ಷ್ಮೀಗೆ ಎಚ್ಚರಿಸಿದ್ದ ಎನ್ನಲಾಗಿದೆ. ಆದರೂ ಗಂಡನ ಮಾತಿಗೆ ಕ್ಯಾರೇ ಮಾಡದ ಲಕ್ಷ್ಮೀ ಅಕ್ರಮ ಸಂಬಂಧಕ್ಕೆ ಮುಂದುವರಿದಿದ್ದಳು. ಗುರುವಾರ ಬೆಳಗ್ಗೆ ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾವಿಗೆ ಲಕ್ಷ್ಮಿಯನ್ನು ಶಂಕರ್ ತಳ್ಳಿದ್ದಾನೆ.
ಬಾವಿ ಬಳಿ ಗಾಯಗೊಂಡು ಬರುತ್ತಿದ್ದಾ ಅನುಮಾನಗೊಂಡ ಸಾರ್ವಜನಿಕರು ಈತನನ್ನು ಹಿಡಿದು ಬೆಮೆಲ್ನಗರ ಪೊಲೀಸರಿಗೆ ಒಪ್ಪಿಸಿದರು. ಆಗ ಕೊಲೆ ಮಾಡಿದ ನಿಜಾಂಶ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ನೂರಾರೂ ಅಡಿಗಳ ಆಳದಲ್ಲಿ ಬಿದ್ದಿದ್ದ ಲಕ್ಷ್ಮೀ ಮೃತ ದೇಹವನ್ನು ಹೊರ ತೆಗೆಯಲು ಹರಸಾಹಸ ಪಟ್ಟರು. ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಪುಟ್ಟಮಾದಯ್ಯ, ಪಿಎಸ್ಐ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿ ಶಂಕರ್ನನ್ನು ಬಂಧಿಸಿ ಕೊಲೆ ದೂರು ದಾಖಲಿಸಲಾಗಿದೆ.