ಅಪಘಾತ: ಪರಿಹಾರ ನೀಡದ ತಹಸೀಲ್ದಾರ್ ಜೀಪು ಜಫ್ತಿ
ಕೋಲಾರ: ಅಪಘಾತದಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ಇಬ್ಬರು ಗಾಯಾಳುಗಳಿಗೆ ಪರಿಹಾರ ನೀಡಲು ಸತಾಯಿಸಿದ ಕೋಲಾರ ತಾಲೂಕು ಕಚೇರಿಯ ತಹಸೀಲ್ದಾರ್ ಅವರ ಜೀಪನ್ನು ಜಫ್ತಿ ಮಾಡಲಾಗಿದೆ.
ತಾಲೂಕಿನ ಖಾಜಿಕಲ್ಲಹಳ್ಳಿಯ ಶ್ರೀರಾಮ ಮತ್ತು ರಾಜಣ್ಣ ಎಂಬುವರು ಕಳೆದ 7 ವರ್ಷ 7 ತಿಂಗಳ ಹಿಂದೆ ದ್ವಿಚಕ್ರ ವಾಹನ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ ವೇಮಗಲ್ ನರಸಾಪುರ ಮದ್ಯಭಾಗದ ಚೌಡದೇನಹಳ್ಳಿ ಗೇಟ್ ಕೋಲಾರ ತಹಸೀಲ್ದಾರ್ ಅವರ ಜೀಪು ಡಿಕ್ಕಿ ಹೊಡೆದಿದ್ದರಿಂದ ದ್ವಿಚಕ್ರ ವಾಹನ ಸವಾರರು ತೀವ್ರವಾಗಿ ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳುಗಳು ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಪ್ರಕರಣ ವಿಚಾರಣೆ ನಡೆಸಿದ್ದ ಜಿಲ್ಲಾ ಪ್ರಧಾನ ಸಿವಿಲಲ್ನ್ಯಾಯಾಲಯವು ಶ್ರೀರಾಮು ಮತ್ತು ರಾಜಣ್ಣನವರಿಗೆ ಬಡ್ಡಿ ಸಹಿತ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ, ತಹಸೀಲ್ದಾರ್ ಅವರು ಪರಿಹಾರ ನೀಡದೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದರಿಂದ ಗುರುವಾರ ನ್ಯಾಯಾಧೀಶರಾದ ಪ್ರಭಾವತಿ ಅವರು ತಹಸೀಲ್ದಾರ್ ಅವರ ವಾಹನ ಜಫ್ತಿ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರ ಪರ ವಕೀಲ ಎಂ.ಕೃಷ್ಣ ಹಾಗೂ ನ್ಯಾಯಾಲಯದ ಸಿಬ್ಬಂದಿ ತಹಸೀಲ್ದಾರ್ ಕಚೇರಿಗೆ ಬಂದು ಕಚೇರಿ ಮುಂದೆ ನಿಲ್ಲಿಸಿದ್ದ ಜೀಪನ್ನು ಜಫ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಘಟನೆಯ ವಿವರ: ಕಳೆದ 2005ರ ಅ.11ರಂದು ಮುಂಜಾನೆ ಕೋಲಾರದ ತಹಸೀಲ್ದಾರ್ ಅವರ ಜೀಪು ಚಲಿಸುತ್ತಿರುವಾಗ, ದ್ವಿಚಕ್ರ ವಾಹನ ಸ್ಕೂಟರ್ಗೆ ಡಿಕ್ಕಿ ಹೊಡೆದು ಅದರಲ್ಲಿದ್ದ ಖಾಜಿಕಲ್ಲಹಳ್ಳಿ ಶ್ರೀರಾಮ ಹಾಗೂ ರಾಜಣ್ಣ ಎಂಬ ಸವಾರರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ಈ ಬಗ್ಗೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪ್ರಕರಣ ಇಲ್ಲಿನ ಜಿಲ್ಲಾ ನ್ಯಾಯಾಲಯದ ಪ್ರಥಮ ದರ್ಜೆ ಸಿವಿಲ್ ನ್ಯಾಯಾಲಯದಲ್ಲಿ ವಾದ ವಿವಾದ ನಡೆದು ಗಾಯಳುಗಳಿಗೆ ಪರಿಹಾರದ ಮೊತ್ತವಾಗಿ ಬಡ್ಡಿ ಸಮೇತ ಶ್ರೀರಾಮ್ ಅವರಿಗೆ 81.140 ಹಾಗೂ ರಾಜಣ್ಣ ಅವರಿಗೆ 47130 ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದರು.
ಆದರೆ, ಈ ಪರಿಹಾರ ಮೊತ್ತ ಸಾಲದು ಎಂದು ದೂರುದಾರರ ವಕೀಲರು ರಾಜ್ಯ ಹೈಕೋರ್ಟ್ಗೆ ಮೊರೆ ಹೋಗಿದ್ದರು. ಅಲ್ಲಿಯೂ ಸಹ ದೂರುದಾರ ಗಾಯಳುಗಳಾದ ಶ್ರೀರಾಮ್ ಅವರಿಗೆ 1.97 ಲಕ್ಷ ಹಾಗೂ ರಾಜಣ್ಣ ಅವರಿಗೆ 1.55 ಲಕ್ಷ ಪರಿಹಾರ ನೀಡಬೇಕೆಂದು ತಹಸೀಲ್ದಾರ್ ಅವರಿಗೆ ಆದೇಶಿಸಲಾಗಿತ್ತು.
ಈ ಪರಿಹಾರ ಮೊತ್ತವನ್ನು ನೀಡದೆ ತಾಲೂಕು ಕಚೇರಿಯವರು ಸತಾಯಿಸಿದ್ದ ಪರಿಣಾಮ ಈ ಹಿಂದೆಯೇ ನ್ಯಾಯಾಲಯವು ತಾಲೂಕು ಕಚೇರಿಯ ಬೆಲೆ ಬಾಳುವ ವಸ್ತುಗಳನ್ನು ಜಫ್ತಿ ಮಾಡುವಂತೆ ಆದೇಶಿಸಿತ್ತಾದರೂ ನ್ಯಾಯಾಲಯಕ್ಕೆ ಹಾಜರಾದ ತಹಸೀಲ್ದಾರ್, ಶಿರಸ್ತೇದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಓರ್ವ ಕಂದಾಯ ಅಧಿಕಾರಿ 15 ದಿನ ಕಾಲಾವಕಾಶ ನೀಡಿದಲ್ಲಿ ಪರಿಹಾರ ಮೊತ್ತವನ್ನು ಪಾವತಿಸುವುದಾಗಿ ಹೇಳಿ ಮುಚ್ಚಳಿಕೆಯನ್ನು ಬರೆದು ಕೊಟ್ಟು ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು.
15 ದಿನಗಳ ಗಡುವು ಮುಗಿದ ನಂತರವೂ ತಾಲೂಕು ಕಚೇರಿಯವರು ಕೊಟ್ಟ ಮಾತಿನಂತೆ ಪರಿಹಾರ ಮೊತ್ತವನ್ನು ಪಾವತಿಸದಿದ್ದರಿಂದ ಬೇಸತ್ತ ಜಿಲ್ಲಾ ಪ್ರಥಮ ದರ್ಜೆ ಸಿವಿಲ್ ನ್ಯಾಯಾಲಯಲದ ನ್ಯಾಯಾಧೀಶರಾದ ಪ್ರಭಾವತಿ ಅವರು ತಹಸೀಲ್ದಾರ್ ಅವರ ವಾಹನವನ್ನು ಜಫ್ತಿ ಮಾಡುವಂತೆ ನೀಡಿದ ಆದೇಶದಂತೆ ವಾಹನವನ್ನು ತಮ್ಮ ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಕೆಲವು ದಿನಗಳ ಹಿಂದೆ ಇದೇ ನ್ಯಾಯಾಲಯವು ರೈತನಿಗೆ ಭೂಸ್ವಾಧೀನದ ಪರಿಹಾರ ನೀಡಿಲ್ಲವೆಂಬ ಕಾರಣಕ್ಕೆ ಉಪ ವಿಭಾಗಾಧಿಕಾರಿ ಕಚೇರಿಯನ್ನು ಜಫ್ತಿ ಮಾಡುವುದಕ್ಕೆ ಆದೇಶ ನೀಡಿದ ನಂತರ ಎಚ್ಚೆತ್ತ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಮನವಿ ಮಾಡಿ ಪರಿಹಾರ ನೀಡುವುದಕ್ಕೆ ಕಡೆಯ ಅವಕಾಶ ಪಡೆದುಕೊಂಡು ಜಫ್ತಿಯಿಂದ ತಪ್ಪಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.