ವಾರ್ಡ್‌ನಿಂದಲೇ ಸ್ಪರ್ಧೆಗೆ ವರ್ತೂರ್ ಮೇಲೆ ಒತ್ತಡ
ಕೋಲಾರ: ನಗರಸಭೆಗೆ ಮಾ.7 ರಂದು ನಡೆಯುವ ಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರ್ ಪ್ರಕಾಶ್ ಬಣದಲ್ಲಿ ತೀವ್ರ ಪೈಪೋಟಿ ಉಂಟಾಗಿದೆ. ವರ್ತೂರ್ ಬಣಕ್ಕೆ ಸೇರಿದ ಹಾಲಿ ಸದಸ್ಯರು ಕೆಲವರು ಮತ್ತೆ ತಮ್ಮ ವಾರ್ಡುಗಳಿಂದಲೇ ಸ್ಪರ್ಧಿಸಲು ಅವಕಾಶ ನೀಡುವಂತೆ ಸಚಿವ ವರ್ತೂರ್ ಪ್ರಕಾಶ್ ಮೇಲೆ ಒತ್ತಡ ತಂದಿದ್ದಾರೆ.
ಇದೇ ಬಣದ ಮುಖಂಡರು ತಮ್ಮ ಮಕ್ಕಳಿಗೆ ಮತ್ತು ಬೆಂಬಲಿಗರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿರುವುದರಿಂದ ಕೆಲವು ವಾರ್ಡುಗಳ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಾಗದೆ ಸಚಿವರು ಧರ್ಮಸಂಕಟ ಅನುಭವಿಸುವಂತಾಗಿದೆ.
ಕೆಲ ಸದಸ್ಯರ ವಿರುದ್ಧ ಸಾರ್ವಜನಿಕರಲ್ಲಿ ಬೇಸರ ಇರುವುದರಿಂದ ಅಂತಹ ಸದಸ್ಯರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡಬಾರದೆಂಬುದು ಸಚಿವರ ಮನಸ್ಸಿನಲ್ಲಿದ್ದರೂ ಹಾಲಿ ಸದಸ್ಯರು ಕೆಲವರು ಸ್ಪರ್ಧೆಗೆ ಅವಕಾಶ ನೀಡದಿದ್ದಲ್ಲಿ ವರ್ತೂರ್ ಬಣ ತೊರೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಸಚಿವರು ಮುಳ್ಳಿನ ಮೇಲೆ ಬಿದ್ದ ಬಟ್ಟೆಯನ್ನು ಸೂಕ್ಷ್ಮವಾಗಿ ತೆಗೆಯುವ ರೀತಿಯಲ್ಲೇ ರಾಜಕೀಯ ಪರಿಸ್ಥಿತಿಯನ್ನು ನಿಭಾಯಿಸಲು ಚಿಂತನೆ ನಡೆಸಿದ್ದಾರೆ.
ಚುನಾವಣೆಯಲ್ಲಿ ತಮಗೆ ಸಹಾಯ ಮಾಡುವ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿರುವ ಸಚಿವರು, ಕಾಂಗ್ರೆಸ್ ಅದರಲ್ಲೂ ವಿಶೇಷವಾಗಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಬಲ್ಲ ಪ್ರಭಾವಿ ವ್ಯಕ್ತಿಗಳನ್ನು ಕಣಕ್ಕೆ ಇಳಿಸಲು ನಿರ್ಧರಿಸಿರುವುದರಿಂದ ಕಳೆದ ಸಾರಿ ಗೆದ್ದ ಕೆಲವರು ಅನಿವಾರ್ಯವಾಗಿ ತ್ಯಾಗ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಕೆಲವರು ಸಚಿವರು ಏನು ಆದೇಶ ನೀಡುತ್ತಾರೋ ಅದನ್ನು ಪಾಲಿಸುವುದಾಗಿ ಹೇಳುತ್ತಿದ್ದರೆ, ಕೆಲವರು ಬೇರೆ ವಾರ್ಡಿನಲ್ಲಾದರೂ ಅವಕಾಶ ನೀಡುವಂತೆ ದಮಕಿ ಹಾಕುತ್ತಿದ್ದಾರೆ.
ಜೆಡಿಎಸ್‌ನಲ್ಲೂ ಟಿಕೆಟಿಗಾಗಿ ಅನೇಕರು ತೀವ್ರ ಲಾಬಿ ನಡೆಸುತ್ತಿದ್ದಾರೆ. ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಮತ್ತು ಕಾರ್ಯಾಧ್ಯಕ್ಷ ಗೋವಿಂದಗೌಡರಿಗೆ ವರ್ತೂರ್ ಬಣದವರನ್ನು ಮಣಿಸಬಲ್ಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕೆಂಬ ಉದ್ದೇಶವಿದ್ದರೂ ಜೆಡಿಎಸ್ ಮುಖಂಡರು ಕೆಲವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವುದಕ್ಕೆ ತೀವ್ರ ಲಾಬಿ ನಡೆಸುತ್ತಿರುವುದರಿಂದ ಟಿಕೆಟ್ ಹಂಚಿಕೆ ಕಬ್ಬಿಣದ ಕಡಲೆಯಾಗಿ ಪರಿಮಮಿಸಿದೆ.
ನಾಮಪತ್ರ ಸಲ್ಲಿಕೆಗೆ ಫೆ.23 ಕಡೆ ದಿನವಾಗಿದೆ. 23ರ ಬೆಳಿಗ್ಗೆ 10 ಗಂಟೆಯೊಳಗೆ ಸಮಸ್ಯೆ ನಿವಾರಣೆ ಮಾಡಿ ಎಲ್ಲಾ 35 ವಾರ್ಡುಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತೀವ್ರ ಕಸರತ್ತು ನಡೆಸಲಾಗುತ್ತಿದೆ. ಇನ್ನು ಕಾಂಗ್ರೆಸ್ ಮುಖಂಡರು ಸೂಕ್ತ ಅಭ್ಯರ್ಥಿಗಳಿಗಾಗಿ ನಗರದ ಎಲ್ಲಾ ವಾರ್ಡುಗಳಲ್ಲಿ ಜನರ ಅಭಿಪ್ರಾಯ ಸಂಗ್ರಹಣೆ ಕಾರ್ಯ ನಡೆಸಿದ್ದು ಗುರುವಾರ ಸಂಜೆ ಈ ಪ್ರಕ್ರಿಯೆ ಮುಗಿಸಿದ್ದಾರೆ. ಫೆ.22ರ ಬೆಳಿಗ್ಗೆ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗಳಿಗೆ ಬಿ.ಫಾರಂ ನೀಡಲು ನಿರ್ಧರಿಸಿದ್ದಾರೆ. ಮುಖಂಡರಿಗೂ ಈ ಚುನಾವಣೆ ಪ್ರತಿಷ್ಠೆ ಆಗಿರುವುದರಿಂದ ಜೆಡಿಎಸ್, ವರ್ತೂರ್ ಬಣದ ವಿರುದ್ಧ ಪ್ರಬಲ ಅಭ್ಯರ್ಥಿಗಳನ್ನು ನಿಲ್ಲಿಸಲು ಸೂಕ್ತ ಅಭ್ಯರ್ಥಿಗಳಿಗಾಗಿ ಶೋಧನೆ ನಡೆಸಿದ್ದಾರೆ. ಬಿಜೆಪಿಯಲ್ಲೂ ಈ ಬಾರಿ ಟಿಕೆಟಿಗಾಗಿ ಪೈಪೋಟಿ ಕಾಣಿಸಿಕೊಂಡಿದೆ. 28 ವಾರ್ಡುಗಳಿಗೆ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ. ಫೆ.22ರಂದು ಬೆಳಿಗ್ಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡವ ಸಾಧ್ಯತೆಗಳಿವೆ.