ವ್ಯಕ್ತಿಗಿಂತ ಪಕ್ಷ ದೊಡ್ಡದು (ಸುದ್ದಿ ಸಂಕ್ಷೇಪ)
ಚಿಂತಾಮಣಿ: ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದು ಕಾಂಗ್ರೆಸ್ ತತ್ವ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ವಾಣಿ ಕೃಷ್ಣಾ ರೆಡ್ಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಅವರು, ಸ್ಥಳೀಯ ಶಾಸಕ ಸುಧಾಕರ್ ಅವರ ಹಠಮಾರಿತನದಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ನೊಂದಿದ್ದಾರೆ. ಚಿಂತಾಮಣಿ ಕ್ಷೇತ್ರದಲ್ಲಿ ಶಾಸಕರ ದರ್ಪದಿಂದ ನಗರಸಭೆ 'ಬಿ' ಫಾರಂ ತಿರಸ್ಕರಿಸಿದ ಪರಿಣಾಮ ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ, ಹಿರಿಯ ಸಚಿವ ವಿ.ಮುನಿಯಪ್ಪ, ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್, ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷ ಬಿಸೇಗೌಡ, ಮಾಜಿ ಸ್ವೀಕರ್ ರಮೇಶ್ಕುಮಾರ್ ಅಭಿಪ್ರಾಯದ ಮೇರೆಗೆ ವಾಣಿ ಕೃಷ್ಣಾರೆಡ್ಡಿ ಅವರಿಗೆ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸಲಾಯಿತು. ಎಲ್ಲಾ 31 ವಾರ್ಡ್ಗಳಿಗೂ 'ಬಿ' ಫಾರಂ ಹೈಕಮಾಂಡ್ ಆದೇಶದ ಮೇರೆಗೆ ನಗರಸಭಾ ಅಭ್ಯರ್ಥಿಗಳಿಗೆ ತರಾತುರಿಯಲ್ಲಿ ವಿತರಿಸಲಾಯಿತು.
'ಕಾಂಗ್ರೆಸ್ ಬಲವರ್ಧನೆ ಪ್ರಾಮಾಣಿಕ ಪ್ರಯತ್ನ'
ಚಿಂತಾಮಣಿ: ಕಾಂಗ್ರೆಸ್ ಬಲಪಡಿಸಲು ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಎಲ್ಲಾ ಕಾರ್ಯಕರ್ತರು, ಮುಖಂಡರನ್ನು ಒಮ್ಮತದಿಂದ ನಗರಸಭೆ ಎಲ್ಲಾ 31 ವಾರ್ಡ್ನಲ್ಲಿಯೂ ಗೆಲ್ಲಲು ಶ್ರಮ ವಹಿಸುವುದಾಗಿ ವಾಣಿ ಕೃಷ್ಣಾರೆಡ್ಡಿ ನುಡಿದರು. ನಗರದ ಕೆ.ಆರ್.ಬಡಾವಣೆಯ ಕೇಂದ್ರ ಸಚಿವ ಮುನಿಯಪ್ಪ ಅವರ ಕಾರ್ಯಾಲಯದಲ್ಲಿ ಕಾಂಗ್ರೆಸ್ ಸೇರ್ಪಡೆ ನಂತರ ಮಾತನಾಡಿ, ಮುಖಂಡರಾದ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಶಾಸಕ ವಿ.ಮುನಿಯಪ್ಪ, ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್, ಮಾಜಿ ಸ್ವೀಕರ್ ರಮೇಶ್ಕುಮಾರ್ ಆಶೀರ್ವಾದ ಮಾಡಿ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಸ್ಥಾನ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ ಪರಿಣಾಮ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿ, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.
ವಾಣಿ ಕಾಂಗ್ರೆಸ್ನತ್ತ: ಕಾರ್ಯಕರ್ತರ ಅಸಮಾಧಾನ
ಚಿಂತಾಮಣಿ: ಜೆಡಿಎಸ್ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆಯದೆ ಏಕಾಏಕಿ ವಾಣಿ ಕೃಷ್ಣಾರೆಡ್ಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಾರ್ಯವೈಖರಿ ಬಗ್ಗೆ ಹಲವಾರು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹಲವು ದಶಕಗಳಿಂದ ಕೆ.ಎಂ. ಕೃಷ್ಣಾರೆಡ್ಡಿ ಕುಟುಂಬ ರಾಜಕೀಯ ಅಸ್ಥಿತ್ವ ಉಳಿಸಿ, ಪ್ರಾಮಾಣಿಕವಾಗಿ ತನ್ನದೇ ಆದ ಶಕ್ತಿ ಹೊಂದಿದ ಕುಟುಂಬವಾಗಿತ್ತು. ಜೆಡಿಎಸ್ ವರಿಷ್ಠರು ವಾಣಿ ಅವರಿಗೆ ಬಾಯಿ ಮಾತಿನಲ್ಲಿ ಆಶ್ವಾಸನೆ ನೀಡುತ್ತಾ 'ಬಿ' ಫಾರಂ ವಿಷಯದಲ್ಲಿ ಮನೆ ಬಾಗಿಲು ಕಾಯುವ ದುಸ್ಥಿತಿ ತಂದಿಟ್ಟರು. ಇದರಿಂದ ಬೇಸತ್ತ ಕಾರಣ ವಾಣಿ ಕಾಂಗ್ರೆಸ್ ಕೈ ಹಿಡಿದರು ಎಂಬ ಮಾತುಗಳು ಶನಿವಾರ ಬೆಳಗ್ಗೆ ತಾಲೂಕು ರಾಜಕೀಯ ವಲಯದಲ್ಲಿ ಪ್ರಚಲಿತದಲ್ಲಿತ್ತು.