47 ಸಾವಿರ ಮತದಾರರ ಬಾಗಿಲಿಗೆ ಸ್ಪರ್ಧಿಗಳು
ಚಿಂತಾಮಣಿ: ಇಲ್ಲಿನ ನಗರಸಭೆಯ 31 ವಾರ್ಡ್ಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಮತದಾರರನ್ನು ವಿವಿಧ ಆಮಿಷಗಳಿಗೆ ಮನವೊಲಿಸಿ ಗೆಲ್ಲಲು ಸಕಲ ಸಿದ್ಧತೆ ನಡೆಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಾಣಿಜ್ಯ ಕೇಂದ್ರವಾದ ಚಿಂತಾಮಣಿ ನಗರಸಭೆಯು ಜಿಲ್ಲೆಯ ಪೈಕಿ 47 ಸಾವಿರ ಮತದಾರರನ್ನು ಹೊಂದಿರುವ ನಗರವಾಗಿದೆ. ಇಲ್ಲಿನ ಮತದಾರರು ಪಕ್ಷಗಳಿಗಿಂತ ವ್ಯಕ್ತಿ ಪ್ರತಿಷ್ಠೆಗೆ ಗೌರವ ಕೊಟ್ಟು ಚುನಾವಣೆಗಳಲ್ಲಿ ಮತ ಹಾಕುವ ಮೂಲಕ ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ರೂಢಿಯಲ್ಲಿತ್ತು. ಆದರೆ, ಈಗ ನಡೆಯಲಿರುವ ನಗರಸಭೆ ಚುನಾವಣೆ ಬೆಳ್ಳಿ ಒಡವೆ, ಚಿನ್ನದ ಒಡವೆ, ಸೀರೆ, ಗರಿಗರಿ ಕನಕಾಂಬರ ನೋಟು ಕೊಟ್ಟು ಮತಗಳನ್ನು ಖರೀದಿಸುವ ಮೂಲಕ ನಗರಸಭೆಯಲ್ಲಿ ಕುಳಿತು ದರ್ಬಾರ್ ನಡೆಸಲು ಸಕಲ ಸಿದ್ಧತೆ ತೆರೆಮರೆಯಲ್ಲಿ ನಡೆಯುತ್ತಿದೆ.
ಅಭ್ಯರ್ಥಿಗಳ ವಿಶ್ವಾಸ: ನಾಮಪತ್ರ ಸಲ್ಲಿಸಿದ ಹಲವಾರು ಅಭ್ಯರ್ಥಿಗಳು ಹಗಲು-ರಾತ್ರಿ ಆಯಾ ವಾರ್ಡ್ಗಳಲ್ಲಿ ಜನರ ಮಧ್ಯೆ ಮಾತನಾಡಿ, ಗೆದ್ದರೆ ತಮ್ಮ ಕೆಲಸ ನೆರವೇರಿಸಿಕೊಡುವ ಭರವಸೆ ನೀಡುವುದೇ ಬಂಡವಾಳವಾಗಿಸಿಕೊಂಡಿದ್ದಾರೆ. ವಾರ್ಡ್ಗಳಿಗೆ ಮೂಲಭೂತ ಸಮಸ್ಯೆಗಳಾದ ನೀರು, ಸ್ವಚ್ಛತೆ, ಬೀದಿ ದೀಪಗಳು, ಒಳಚರಡಿ ಇನ್ನೂ ಮುಂತಾದ ಸಮಸ್ಯೆಗಳ ಬಗ್ಗೆ 'ಕಾಲ್ ಮಾಡಿ ಸಾಕು, ಕೆಲಸ ಆಗುತ್ತೆ' ಎಂಬಂಥ ವಿಶ್ವಾಸದ ನುಡಿಗಳನ್ನು ತೋರುತ್ತಿದ್ದಾರೆ. ಚುನಾವಣೆಯಲ್ಲಿ ಇಂಥ ತಂತ್ರಗಳು ಮಾಮೂಲಿಯಾಗಿದ್ದು, ಪ್ರಜ್ಞಾವಂತ ಮತದಾರ ಯಾವ ರೀತಿ ವರ್ತಿಸುತ್ತಾನೆ ಎಂಬುದರ ಮೇಲೆ ಅಭ್ಯರ್ಥಿಗಳ ಗೆಲವು ಆಧರಿಸಿದೆ.
ಅಬ್ಬರದ ಪ್ರಚಾರ: ಕಳೆದ ನಗರಸಭೆ ಚುನಾವಣೆಯಲ್ಲಿ ಗೆದ್ದು ನಂತರ ದಿನಗಳಲ್ಲಿ ವಾರ್ಡ್ಗಳ ಅಭಿವೃದ್ಧಿ ಕಡೆ ಮುಖ ತೋರಿಸದ ಹಲವಾರು ಸದಸ್ಯರು ಮತ್ತೆ ಒಂದು ಅವಕಾಶ ಕಲ್ಪಿಸಿಕೊಡಿ. ನಿಮ್ಮ ಮಗನಿಗೆ ಆ ಕೆಲಸ ಕೊಡಿಸುತ್ತೇನೆ ಈ ಕೆಲಸ ಕೊಡಿಸುತ್ತೇನೆ ಎಂದು ಅಬ್ಬರ ಪ್ರಚಾರದಲ್ಲಿ ತೊಡಗಿದ್ದಾರೆ. ಮನೆಗೆ ಭೇಟಿ ನೀಡಿ ಕೈ ಹೆಗಲ ಮೇಲೆ ಹಾಕಿ ಸಿಹಿ ಮಾತು ಆಡಿ ಮನಸ್ಸು ಒಲಿಸಿಕೊಳ್ಳುವ ಯತ್ನದಲ್ಲಿದ್ದಾರೆ.
ರಿಯಲ್ ಎಸ್ಟೇಟ್-ಫೈನಾನ್ಶಿಯರ್ಸ್ಗಳು: ನಾವು ಸಮಾಜ ಸೇವೆ ಮಾಡಲು ಬಂದಿದ್ದೇವೆ, ತಮ್ಮ ವಾರ್ಡ್ಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ನಿಮ್ಮ ಬಡಾವಣೆಗಳಲ್ಲಿ ಒಳ್ಳೆಯ ಸಿಮೆಂಟ್ ರಸ್ತೆ, ನೀರು ಸಂಪರ್ಕದ ಪೈಪ್ಲೈನ್, ಆಶ್ರಯ ಮನೆಗಳ ನೆರವು ಕಲ್ಪಿಸುವುದು ಮತ್ತಿತರ ಭರವಸೆ ನೀಡುವ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ಫೈನಾನ್ಶಿಯರ್ಗಳೇ ಅಧಿಕ ಮಂದಿ ಸ್ಪರ್ಧೆಯಲ್ಲಿದ್ದಾರೆ. ಇನ್ನು ಹಲವರು ತಮ್ಮ ಪತ್ನಿಯರ ಜೊತೆ ವಾರ್ಡ್ಗಳಲ್ಲಿ ಸಂಚರಿಸಿ ಕೈ ಜೋಡಿಸಿ ಹೋದ-ಹೋದ ಮನೆಗೆಲ್ಲಾ ಹರಿಶಿನ-ಕುಂಕುಮ ಇಟ್ಟು ನಮ್ಮನ್ನು ಆಶೀರ್ವದಿಸಿ ಎಂದು ಮತಗಳನ್ನು ಖರೀದಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ.
ಮತಗಳನ್ನು ಖರೀದಿಸುವ ಸಂತೆ: ಈಗಾಗಲೇ ಕೆಲವರು ಮತದಾರರಿಗೆ ಧಾರ್ಮಿಕ ಪ್ರವಾಸ, ಶ್ರೀಶಕ್ತಿ ಗುಂಪುಗಳಿಗೆ ಧನ ಸಹಾಯ, ಚಿಕಿತ್ಸೆ ವೆಚ್ಚ, ಪ್ರವಾಸ ಪ್ಯಾಕೇಜ್, ಗುಂಡು-ತುಂಡುಗಳ ಪಾರ್ಟಿಗಳು ನಗರದ ಹೊರವಲಯದ ಹಲವಾರು ಡಾಬಾ ಹಾಗೂ ರೆಸಾರ್ಟ್ಗಳಲ್ಲಿ ಮತದಾರರನ್ನು ಸೆಳೆಯುವ ಯೋಜನೆಗಳು, ಡೀಲಿಂಗ್ಗಳು ಅಭ್ಯರ್ಥಿಗಳ ಹಿಂಬಾಲಕರು ಹಾಗೂ ಆಪ್ತರ ಮುಖಾಂತರ ರಹಸ್ಯವಾಗಿ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುವುದು ಅತ್ಯಂತ ಅಮೂಲ್ಯವಾದುದು. ಇದಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಆದುದರಿಂದ ಮತದಾರ ಪ್ರಭುಗಳು ತಾವು ಸರಿಯಾದ ಯೋಗ್ಯ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ ಸಂವಿಧಾನಬದ್ಧ ಮೌಲ್ಯಗಳನ್ನು ಎತ್ತಿ ಹಿಡಿಯಲು ಪ್ರತಿ ಮತದಾರನ ಹಕ್ಕಾಗಿದೆ.
-ಎನ್. ಬಾಬು