ಅಪಘಾತ: ಎಸ್‌ಡಿಸಿ ಪರೀಕ್ಷೆಗೆ ಬರುತ್ತಿದ್ದ ಇಬ್ಬರಿಗೆ ಗಾಯ
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯುತ್ತಿದ್ದ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆಗಮಿಸುತ್ತಿದ್ದ ಇಬ್ಬರು ಅಭ್ಯರ್ಥಿಗಳು ಅಪಘಾತದಿಂದ ತೀವ್ರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ತಾಲೂಕಿನ ಹೂನೇಗಲ್ ಸಮೀಪ ನಡೆದಿದೆ.
ಬಾಗೇಪಲ್ಲಿ ತಾಲೂಕಿನ ಗೊರ್ತಪಲ್ಲಿಯ ಗ್ರಾ.ಪಂ. ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಬಾಬು ನಾಯಕ್ (24 ವರ್ಷ) ಮತ್ತು ಚಿಕ್ಕಬಳ್ಳಾಪುರದ ಎಸ್‌ಜೆ ಸಿಐಟಿ ಕಾಲೇಜಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್‌ನ 3ನೇ ಸೆಮಿಸ್ಟರ್ ಓದುತ್ತಿರುವ ತಿಮ್ಮಂಪಲ್ಲಿಯ ವೆಂಕಟೇಶ್ (23 ವರ್ಷ) ಗಾಯಗೊಂಡವರು.
ಬಾಗೇಪಲ್ಲಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಚಿಕ್ಕಬಳ್ಳಾಪುರಕ್ಕೆ ದ್ವಿಚಕ್ರ ವಾಹನದಲ್ಲಿ ಆಗಮಿಸುತ್ತಿದ್ದ ಸಂದರ್ಭ ಟಿಲ್ಲರ್ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಮುಗುಚಿ ಬಿದ್ದ ದ್ವಿಚಕ್ರ ವಾಹನ ಸಮೀಪದ ಗೋಡೆಗೆ ಹೋಗಿ ಅಪ್ಪಳಿಸಿದೆ. ಇದರಿಂದ ಬಾಬು ನಾಯಕ್ ಮತ್ತು ವೆಂಕಟೇಶ್ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿದೆ. ಒಬ್ಬರಿಗೆ ಒಂದು ಕಾಲು ಮುರಿದಿದ್ದು, ಆರೋಗ್ಯ ಕವಚ-108 ಆ್ಯಂಬ್ಯುಲೆನ್ಸ್ ವಾಹನ ಘಟನೆಯ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದೆ. ಆಸ್ಪತ್ರೆ ವೈದ್ಯರು ತುರ್ತು ಚಿಕಿತ್ಸೆ ನೀಡಿ ಗಾಯಾಳುಗಳಿಬ್ಬರ ತಲೆಗೂ ಹೊಲಿಗೆ ಹಾಕಿದ್ದಾರೆ. ಗಂಭೀರ ಗಾಯಗಳಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲಿಸಲಾಗಿದೆ. ಹೂನೇಗಲ್ ಗ್ರಾಮದ ಶ್ರೀನಿವಾಸ್ ಎಂಬುವವರಿಗೆ ಟಿಲ್ಲರ್ ಸೇರಿದ್ದೆನ್ನಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.