ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಂಎಲ್‌ಎಗಳಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಬಿಸಿ ತುಪ್ಪ

Parashurama
Updated On : 25 Feb 2013, 12:46 pm

ಕೋಲಾರ:  ಮಾ.7 ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಶಾಸಕರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ವಿಧಾನಸಭಾ ಚುನಾವಣೆ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದ್ದರೆ ಅಭ್ಯರ್ಥಿಗಳ ಗೆಲುವಿಗೆ ಕಾಸು-ಕಜ್ಜಾಯ ಇಲ್ಲದೆ ಹೇಗೋ ನಿಭಾಯಿಸಬಹುದಿತ್ತು ಎಂಬುದು ಶಾಸಕರ ಲೆಕ್ಕಾಚಾರವಾಗಿತ್ತು.
ಆದರೆ, ಈ ಚುನಾವಣೆಯಲ್ಲಿ ಎರುರಾಳಿಗಳ ವಿರುದ್ಧ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಕೈಕೊಡಬಹುದೆಂಬ ಭಯದಿಂದ ಶಾಸಕರು ಪ್ರತಿ ಅಭ್ಯರ್ಥಿಗೆ ಕನಿಷ್ಠ 5 ರಿಂದ 10 ಲಕ್ಷ ಖರ್ಚು ಮಾಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಅಡಕತ್ತರಿಯಲ್ಲಿ ಸಿಕ್ಕಿ ಒದ್ದಾಡುವಂತಾಗಿದೆ.
ಚುನಾವಣಾ ಆಯೋಗವು ನಗರಸಭೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ 2 ಲಕ್ಷಗಳ ವರೆಗೆ ಚುನಾವಣಾ ವೆಚ್ಚ ಭರಿಸಲು ಅವಕಾಶ ಕಲ್ಪಿಸಿದೆ, ಪುರಸಭೆಯ ಅಭ್ಯರ್ಥಿಗಳು 1.50 ಲಕ್ಷ ಖರ್ಚು ಮಾಡಬೇಕಾಗಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷ ಮತ್ತು ಪಕ್ಷೇತರ ಶಾಸಕರ ಪರವಾಗಿ ಸ್ಪರ್ಧಿಸಿರುವ ಅನೇಕರು ಹಾಲಿ ಶಾಸಕರಿಂದ ಚುನಾವಣಾ ವೆಚ್ಚವನ್ನು ನಿರೀಕ್ಷೆ ಮಾಡುತ್ತಿರುವುದಲ್ಲದೆ, ಪಾರ್ಟಿ ಫಂಡ್ಸ್‌ಹ ಕೊಡಿಸಬೇಕೆಂದು ದುಂಬಾಲು ಬೀಳುತ್ತಿರುವುದರಿಂದ ಶಾಸಕರು ಏಕಾದರೂ ಬಂತಪ್ಪ ಈ ಚುನಾವಣೆ ಎಂದು ತಲೆ ಮೇಲೆ ಕೈ ಹೊತ್ತುಕೊಳ್ಳುವ ಪರಿಸ್ಥಿತಿ ಒದಗಿಸಿದೆ.
ಈ ಚುನಾವಣೆಯಲ್ಲಿ ನಮ್ಮ ಕಡೆಯವರು ಗೆಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ತಮ್ಮ ಪರವಾಗಿ ಕೆಲಸ ಮಾಡುವುದಕ್ಕೆ ಯಾರೂ ಸಿಗಲ್ಲ, ಈ ಚುನಾವಣೆಯಲ್ಲಿ ಪಡೆದ ಮತಗಳನ್ನು ಆಧರಿಸಿ ನಮ್ಮ ಚುನಾವಣೆಯಲ್ಲೂ ಲೀಡ್ ಪಡೆಯಬಹುದು ಎಂದು ಭಾವಿಸಿರುವ ಶಾಸಕರು ನಗರಸಭೆಗೆ ಸ್ಪರ್ಧಿಸಿರುವ ತಮ್ಮ ಕಡೆಯ 35 ಜನರಿಗೆ ಕನಿಷ್ಠ 3 ಕೋಟಿಯಿಂದ 5 ಕೋಟಿವರೆಗೆ ಖರ್ಚು ಮಾಡಬೇಕಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಲಿ ಶಾಸಕರು ಮಾತ್ರವಲ್ಲದೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಮಾಜಿ ಶಾಸಕರು, ಪ್ರಬಲ ಆಕಾಂಕ್ಷಿಗಳು ಸಹ ದುಬಾರಿಯಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬಂಡವಾಳ ಹಾಕಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಚುನಾವಣಾ ಆಯೋಗದ ಮೇಲೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಒಂದು ವೇಳೆ ಈ ಚುನಾವಣೆಯಲ್ಲಿ ನಾವು ಬಂಡವಾಳ ಹಾಕಿ ಗೆಲ್ಲಿಸುವ ಅಭ್ಯರ್ಥಿಗಳು ನಮ್ಮ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸರಿ, ಈಗ ಗೆದ್ದು ನಮ್ಮ ಚುನಾವಣೆಗೆ ಕೈಕೊಟ್ಟರೆ ಏನು ಮಾಡುವುದು ಎಂದು ಚಿಂತೆಗೀಡಾಗಿರುವ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಆಕಾಂಕ್ಷಿಗಳು,ತಮ್ಮ ಅಭ್ಯರ್ಥಿಗಳು ಗೆದ್ದ ನಂತರ ಬೇರೆಡೆಗೆ ಜಾರಿ ಹೋಗದಂತೆ ಎಚ್ಚರವಹಿಸಲು ಕರಾರು ಪತ್ರಗಳಿಗೆ ಸಹಿ ಮಾಡಿಸಿಕೊಂಡು ಚುನಾವಣಾ ವೆಚ್ಚ ಭರಿಸಲು ನಿರ್ಧರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement