ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ
ಚಿಕ್ಕಬಳ್ಳಾಪುರ: ಪ್ರತಿಭಾವಂತ ಕ್ರೀಡಾಪಟು ನಾಗೇಶ್ ಅವರ ಸ್ಮರಣಾರ್ಥ ತಾಲೂಕಿನ ಮಂಚನಬಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಿತು. ಸುಭಾಷ್ ಯುವಕರ ಸಂಘದ ವತಿಯಿಂದ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ತಾ.ಪಂ. ಮಾಜಿ ಅಧ್ಯಕ್ಷ ವೆಂಕಟನಾರಾಯಣಪ್ಪ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮದ ಯುವಕರು ಪ್ರತಿಭಾವಂತ ಕ್ರೀಡಾಪಟುವಾಗಿದ್ದ ನಾಗೇಶ್ ಅವರನ್ನು ಸ್ಮರಿಸುವ ಸಲುವಾಗಿ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಕ್ರೀಡೆಗಳಲ್ಲಿ ಸೋಲು ಗೆಲುವು ಎನ್ನುವುದು ಸಾಮಾನ್ಯ. ಇಂದು ಸೋತವರು ಮುಂದೆ ಗೆಲ್ಲುತ್ತಾರೆ. ಗೆದ್ದವರು ಸೋಲನ್ನು ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕ್ರೀಡೆಗಳಲ್ಲಿ ಹೆಚ್ಚಿಗೆ ಭಾಗವಹಿಸಲು ಮುಂದಾಗಬೇಕು. ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕವಾಗಿಯೂ ಆರೋಗ್ಯ ಸುಧಾರಣೆಯನ್ನು ಕಾಣುತ್ತದೆ ಎಂದು ತಿಳಿಸಿದರು. ಪ್ರೊ. ಕೋಡಿರಂಗಪ್ಪ ಮಾತನಾಡಿ, ಯಾರನ್ನೇ ಆಗಲಿ ನಿರಂತರವಾಗಿ ಕೈಗೊಳ್ಳುವ ಅಭ್ಯಾಸಗಳು ನುರಿತರನ್ನಾಗಿಸುತ್ತವೆ. ಕ್ರೀಡೆಗಳಿಗೆ ಅಭ್ಯಾಸವು ಪ್ರಮುಖವಾಗಿ ಪಾತ್ರವನ್ನು ವಹಿಸುತ್ತದೆಯಾದ್ದರಿಂದ ಕೇವಲ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮಾತ್ರವಲ್ಲ, ನಿರಂತರ ಅಭ್ಯಾಸ ಮುಖ್ಯ. ಇದನ್ನರಿತು ಕ್ರೀಡಾಪಟುಗಳು ಗೆಲ್ಲುವ :ವಲದೊಂದಿಗೆ ಅಭ್ಯಾಸ ಮಾಡಬೇಕು. ಕ್ರೀಡೆಗಳಲ್ಲಿ ಭಾಗವಹಿಸಿ ಊರಿಗೆ, ದೇಶಕ್ಕೆ ಕೀರ್ತಿಯನ್ನು ತರಬೇಕೆಂದ ಅವರು, ಪೋಷಕರು ತಮ್ಮ ಮಕ್ಕಳು ಓದುವುದರ ಜತೆಗೆ ಕ್ರೀಡೆಗಳಲ್ಲೂ ಸಾಧನೆ ಮಾಡಬೇಕೆಂಬ ಭಾವನೆಯನ್ನು ಹೊಂದಿರಬೇಕು. ಜತೆಗೆ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು. ಗ್ರಾ.ಪಂ.ಅಧ್ಯಕ್ಷ ರಮೇಶ್, ನ್ಯೂಟರ್ ಗ್ರಾಮರ್ ಶಾಲೆಯ ಛೇರ್ಮನ್ ಎಸ್.ವಿ. ಲೋಕೇಶ್ ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಜಯಚಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯೆ ಪ್ರಭಾವತಮ್ಮ, ಎಸ್ ಡಿಎಂಸಿ ಅಧ್ಯಕ್ಷ ರಮೇಶ್, ಮಂಚನಬಲೆ ಮಂಡಲ್ ಪಂಚಾಯಿತಿ ಮಾಜಿ ಉಪ ಪ್ರಧಾನ ಸದಾಶಿವರೆಡ್ಡಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಮಾಜಿ ಉಪಾಧ್ಯಕ್ಷ ಸೊಣ್ಣೇಗೌಡ, ರಾಜ್ಯ ಬೆಳಕು ಯುವಕರ ಸಂಘದ ಅಧ್ಯಕ್ಷ ವೇಣು, ಅಗ್ರಿ ರೀಟೆಲ್ ಟೋಟಲ್ನ ವಿನಯ್ಕುಮಾರ್, ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.