ಜಿಲ್ಲಾಸ್ಪತ್ರೆ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡೋರ್ಯಾರು?
ಚಿಕ್ಕಬಳ್ಳಾಪುರ: ಸ್ವತಃ ವೈದ್ಯರೂ ಆಗಿರುವ ಜಿಲ್ಲಾಧಿಕಾರಿಗಳೇ, ಸ್ವಲ್ಪ ಜಿಲ್ಲಾ ಸರ್ಕಾರಿ ಆಸ್ಪತ್ರೆಯತ್ತ ನೋಡಿ, ಬಡ ರೋಗಿಗಳ ಸಂಕಷ್ಟ ಬಗೆಹರಿಸಿ, ರೋಗಗಳಿಗಿಂತಲೂ ಇಲ್ಲಿನ ಸಮಸ್ಯೆಗಳಿಗೆ ರೋಗಿಗಳು ಜೀವ ಕಳೆದುಕೊಳ್ಳುವ ದುಸ್ಥಿತಿ ತ್ವರಿತವಾಗಿ ತಪ್ಪಿಸಿ...
- ಇಂತಹ ಮಾತನ್ನು ಜನಪ್ರತಿನಿಧಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಆದರೆ, ಜಿಲ್ಲಾಧಿಕಾರಿಯವರು ಸಕಾರಾತ್ಮಕವಾಗಿ ಸ್ಪಂದಿಸುವರೆಂಬ ಭರವಸೆ ಬಡ ರೋಗಿಗಳದು.
ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವರು ಆಸ್ಪತ್ರೆ ಸುಧಾರಣೆಯ ಬಗ್ಗೆ ಭರವಸೆ ಕೊಟ್ಟು ಜನರನ್ನು ಸಂತೃಪ್ತಗೊಳಿಸಿದ್ದಾರೆಯೇ ಹೊರತು ಆಸ್ಪತ್ರೆಯ ಕಂಟಕ ಮಾತ್ರ ದೂರವಾಗುತ್ತಿಲ್ಲ. ಕನಿಷ್ಠ ಮೂಲ ಸೌಲಭ್ಯಗಳಾದರೂ ಆಸ್ಪತ್ರೆಗೆ ದಕ್ಕುತ್ತಿಲ್ಲ. ಹೆಸರಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಎಂದು ಕರೆಸಿಕೊಳ್ಳುತ್ತಿದೆಯಾದರೂ ತಾಲೂಕು ಆಸ್ಪತ್ರೆಯ ಸ್ಥಿತಿಯಲ್ಲಿಯೇ ಉಳಿದುಕೊಂಡು ಬಡ ರೋಗಿಗಳನ್ನು ಪೀಡಿಸುತ್ತಿದೆ.
ವೈದ್ಯರ ಕೊರತೆ: ಜಿಲ್ಲಾ ಕೇಂದ್ರದಲ್ಲಿನ ಆಸ್ಪತ್ರೆಗೆ ಜಿಲ್ಲೆಯ ವಿವಿಧೆಡೆ ತಾಲೂಕುಗಳಿಂದ ಮಾತ್ರವಲ್ಲದೆ ಸಮೀಪದ ವಿಜಯಪುರ, ದೊಡ್ಡಬಳ್ಳಾಪುರ, ಬಾಗೇಪಲ್ಲಿಗೆ ಹೊಂದಿಕೊಂಡಂತಿರುವ ಆಂಧ್ರ ಗಡಿ ಭಾಗಗಳಿಂದಲೂ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಪ್ರತಿನಿತ್ಯ ವೈದ್ಯರ ಕೊಠಡಿಗಳ ಮುಂದೆ ಜನ ತುಂಬಿ ತುಳುಕಾಡುತ್ತಿರುತ್ತಾರೆ. ಆದರೆ, ವೈದ್ಯರು ಮಾತ್ರ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲ. ಪ್ರಸ್ತುತ ರೋಗಿಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಇಲ್ಲಿಗೆ ಕನಿಷ್ಠ ಪಕ್ಷ 20 ಮಂದಿ ವೈದ್ಯರಾದರೂ ಬೇಕು. ಆದರೆ, ಸದ್ಯ 7 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲೂ ಇಬ್ಬರು ಬೇರೆ ಕಡೆಯಿಂದ ಬಂದು ಕೆಲಸ ಮಾಡುವಂತಹುದು. ಇನ್ನೂ ಫಿಜಿಶಿಯನ್, ಗೈನಿಕಾಲಜಿಸ್ಟ್, ಇಎನ್ಟಿ ತಜ್ಞರೇ ಇಲ್ಲ. ಹಿಂದೆ 13 ಮಂದಿ ವೈದ್ಯರಿದ್ದರು. ಆಸ್ಪತ್ರೆಯಲ್ಲಿನ ಒತ್ತಡದ ಕೆಲಸದಿಂದ ತಲೆನೋವು ತಂದುಕೊಂಡು ಅನೇಕರು ಕೆಲಸ ಬಿಟ್ಟು ಹೋಗಿದ್ದು, ಇನ್ನೂ ಕೆಲವರು ಗುಡ್ ಬೈ ಹೇಳುವಲ್ಲಿದ್ದಾರೆ. ಕೊಟ್ಟ ರಾಜಿನಾಮೆ ಅಂಗೀಕರಿಸಿದರೂ ಸರಿ, ಇಲ್ಲವೇ ತೆಗೆದು ಹಾಕಿದರೂ ಸರಿ ಎಂಬ ಭಾವನೆ ಅವರದ್ದಾಗಿದೆ. ಈಗಲೇ ಆಸ್ಪತ್ರೆ ವೈದ್ಯರ ಸಮಸ್ಯೆ ಬಿಗಡಾಯಿಸಿದೆ ಎಂದುಕೊಳ್ಳುವ ಸಂದರ್ಭದಲ್ಲಿ ಆಸ್ಪತ್ರೆಗೆ ಬರುವ ಕೆಲ ವೈದ್ಯರು ಕೇವಲ ಹಾಜರಾತಿಗೆ ಸಹಿ ಹಾಕಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಆರಾಮಾಗಿ ಚಿಕಿತ್ಸೆ ಕೊಡುತ್ತಿರುವುದೂ ಇದೆ. ಕೆಲವರು ಸರ್ಕಾರಿ ಆಸ್ಪತ್ರೆಯ ಕೆಲ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳತ್ತ ಸೆಳೆದುಕೊಂಡು ಹಣ ಸಂಪಾದಿಸುವುದನ್ನು ಪ್ರಮುಖ ಕಾಯಕವನ್ನಾಗಿಸಿಕೊಂಡಿರುವುದು ಸಹ ಸಮಸ್ಯೆಯಾಗಿದೆ.
ಇರುವವರಿಗೆ ಪೆಟ್ಟು: ಹೋದವ ತಪ್ಪಿಸಿಕೊಂಡ, ಇದ್ದವ ಸಿಕ್ಕಿ ಹಾಕಿಕೊಂಡ ಎನ್ನುವಂತೆ ಆಸ್ಪತ್ರೆಯಲ್ಲಿರುವ ವೈದ್ಯರುಗಳು ಸದ್ಯ ಒತ್ತಡದಲ್ಲಿ ಕೆಲಸವನ್ನು ನಿರ್ವಹಿಸಬೇಕಾದ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದಾರೆ. ಎಷ್ಟು ನೋಡಿದರೂ ಸಹ ಮುಗಿಯದ ರೋಗಿಗಳ ಗೋಳು ಕೇಳಬೇಕು. ಬೇರೆ ಬೇರೆ ಕೆಲಸ ನಿಭಾಯಿಸಬೇಕು. ಒಬ್ಬರು ವೈದ್ಯರು ರಜೆ ಹಾಕಿ ತೆರಳಿದರೆ ಸಾಕು, ಇರುವ ವೈದ್ಯರುಗಳಿಗೆ ತಲೆನೋವು ಶುರುವಾಗುತ್ತದೆ. ಸಮರ್ಪಕವಾಗಿ ಚಿಕಿತ್ಸೆ ಕೊಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೆಯೇ ಸಾಲು ಸಾಲಾಗಿ ಬಾಗಿಲಿನ ಮುಂಭಾಗ ನಿಂತಿರುವ ರೋಗಿಗಳನ್ನು ಬಿಟ್ಟು ಬರಲೂ ಆಗದೇ, ತುರ್ತು ಚಿಕಿತ್ಸೆ ಅಗತ್ಯವಿರುವವನ್ನು ನೋಡಲು ಆಗದೆ ಒತ್ತಡಕ್ಕೆ ಸಿಲುಕಿಕೊಳ್ಳಬೇಕಾದ ಪರಿಸ್ಥಿತಿ ವೈದ್ಯರದ್ದು. ಜತೆಗೆ ಹಾಸಿಗೆಗಳ ಕೊರತೆ, ಅಗತ್ಯವಿರುವ ಉಪಕರಣಗಳ ಸಮಸ್ಯೆ, ಕಡಿಮೆ ಸೌಲಭ್ಯಗಳಿಂದ ಇರುವ ವೈದ್ಯರು ಅಸಹಾಯಕರಾಗಿದ್ದಾರೆ.
-ಎನ್. ವೆಂಕಟೇಶ್