ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಮ್ಮ ಬೆಳವಣಿಗೆ ಜತೆ ಜನಾಂಗವನ್ನೂ ಬೆಳೆಸಬೇಕು: ಎಲ್.ಕೆ.ರಾಜು ಸಲಹೆ

Parashurama
Updated On : 25 Feb 2013, 12:40 pm

ಚಿಕ್ಕಬಳ್ಳಾಪುರ: ತಾವು ಬೆಳೆಯುವುದರ ಜತೆ ಜತೆಯಲ್ಲಿಯೇ ನಮ್ಮ ಜನಾಂಗ ಸಹ ಬೆಳೆಯಬೇಕೆಂಬ ಮನೋಭಾವನೆಯನ್ನು ಪ್ರತಿಯೊಬ್ಬರು ಹೊಂದಿರಬೇಕೆಂದು ಅಖಿಲ ಭಾರತ ರಾಜು ಕ್ಷತ್ರಿಯ ಸಂಘದ ಅಧ್ಯಕ್ಷ ಎಲ್.ಕೆ. ರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶ್ರೀ ಚನ್ನಕೇಶವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಾಜು ಕ್ಷತ್ರಿಯ ಹಿಂದುಳಿದ ವರ್ಗದ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷತ್ರಿಯ ಸಮುದಾಯದಲ್ಲಿ ವೈಯಕ್ತಿಕವಾಗಿ ಹೆಚ್ಚಿಗೆ ಜನರು ಆರ್ಥಿಕವಾಗಿ ಅಭಿವೃದ್ಧಿಯನ್ನು ಸಾಧಿಸುತ್ತಿದ್ದಾರೆ ಎನ್ನುವುದು ಸಂತೋಷದ ವಿಷಯವಾದರೂ ಸಹ ಸಂಘಟನೆಯ ಕೊರತೆಯಿಂದ ಜನಾಂಗವು ಹಿಂದುಳಿಯುತ್ತಿದೆ. ಇದರಿಂದ ದೊರೆಯಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತರೆ ಜನಾಂಗಗಳಿಗೆ ಹೋಲಿಕೆ ಮಾಡಿಕೊಂಡಾಗ ನಮ್ಮ ಜನಾಂಗದಲ್ಲಿ ಸಂಘಟನೆಯ ಕೊರತೆಯು ಪ್ರಮುಖವಾಗಿ ಕಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾಜದಲ್ಲಿನ ಬೇರೆ ಜನಾಂಗದವರು ಸಂಘಟನೆಯಿಂದ ಪ್ರಗತಿಯನ್ನು ಸಾಧಿಸುತ್ತಿರುವುದನ್ನು ಮನಗಂಡು ಸ್ವಯಂ ಪ್ರೇರಣೆಯಿಂದ ನಾವೆಲ್ಲರೂ ಸಹ ಪ್ರಬಲ ಸಂಘಟನೆಗೆ ಒತ್ತು ಕೊಡಬೇಕಾಗಿದೆ. ಜನಾಂಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಈ ಮೂಲಕ ಸಂಘಟನೆಗೆ ಶಕ್ತಿ  ತರಬೇಕೆಂದು ತಿಳಿಸಿದರು.
ಕ್ಷತ್ರೀಯ ಎನ್ನುವುದು ಒಂದು ಪಂಗಡ. ಅರಸು ಎನ್ನುವುದು ಜಾತಿಯಲ್ಲ. ಅರಸರ ವಂಶಸ್ಥರಾಗಿರುವುದಕ್ಕೆ ಹೆಸರಿನಲ್ಲಿ ಅರಸ್ ಎಂಬ ಪದ ಬಳಕೆಯಾಗುತ್ತ ಬಂದಿದೆ. ಇದನ್ನು ನೆಪವಾಗಿಟ್ಟುಕೊಂಡು ಅರಸು ಎಂಬ ಪದದಿಂದ ಕ್ಷತ್ರಿಯ ಜನಾಂಗವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲಾಗುವುದಿಲ್ಲ ಎಂದು ತಕರಾರು ತೆಗೆಯಲಾಯಿತು. ಇದರಿಂದ ಹೋರಾಟ ನಡೆಸಿ ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಮಾಡಲಾಯಿತು. ಹೀಗೆ ಜನಾಂಗದ ಅಭಿವೃದ್ಧಿಗೆ ಹೋರಾಟಗಳನ್ನು ನಡೆಸಬೇಕಾಗಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘಟನೆಯ ಪ್ರಮುಖ ಪಾತ್ರ ವಹಿಸುತ್ತದೆ ಎಂದ ಅವರು, ಜನಾಂಗದ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ನೆರವನ್ನು ನೀಡಲು ಸಿದ್ಧರಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಕರ್ನಾಟಕ ತೆಲುಗು ಅಕಾಡೆಮಿಯ ಅಧ್ಯಕ್ಷ ರಾಧಾಕೃಷ್ಣರಾಜು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕು. ಕೇವಲ ಎಂಜಿನಿಯರಿಂಗ್ ಓದು ಎಂದು ಮಕ್ಕಳ ಮೇಲೆ ಒತ್ತಡವನ್ನು ಹೇರುವುದಲ್ಲ. ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವಂತೆ ಮಾಡಬೇಕು. ಇದಕ್ಕಾಗಿ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಇದು ಜನಾಂಗದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕ್ಷತ್ರಿಯ ಹಿಂದುಳಿದ ವರ್ಗದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್. ವೆಂಕಟಾಚಲರಾಜು, ರಾಜ್ಯ ರಾಜು ಕ್ಷತ್ರೀಯ ಸಂಘದ ಕಾರ್ಯದರ್ಶಿ ಸುಬ್ಬರಾಜು, ಸದಸ್ಯ ಪುಟ್ಟರಾಜು, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸರಾಜು, ಮಹಿಳಾ ಸಂಘದ ಅಧ್ಯಕ್ಷೆ ಸರಸ್ವತಮ್ಮ, ರೇವ್ ವಿದ್ಯಾ ಸಂಸ್ಥೆಯ ಛೇರ್ಮನ್ ಚಾಮರಾಜು, ಮುಖಂಡರಾದ ಅಶ್ವತ್ಥನಾರಾಯಣರಾಜ್ ಅರಸು, ಸುಬ್ಬರಾಜು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement