ನಾಮಪತ್ರಗಳ ಸಲ್ಲಿಕೆ ಭರಾಟೆ ಅಂತ್ಯ
ರಾಮನಗರ: ಪೌರ ಸಂಸ್ಥೆಗಳ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಭರಾಟೆ ಅಂತ್ಯಗೊಂಡಿದೆ. ರಾಜಕೀಯ ಮುಖಂಡರಿಗೆ ಟಿಕೆಟ್ ಹಂಚಿಕೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಪ್ರಮುಖ ಪಕ್ಷಗಳಲ್ಲಿ ಬಿ ಫಾರಂ ವಂಚಿತರು ಬಂಡಾಯ ಸಾರಿದ್ದು, ಅವರ ಮನವೊಲಿಕೆಯಲ್ಲಿ ಮುಖಂಡರು ನಿರತರಾಗಿದ್ದಾರೆ.
ಜಿಲ್ಲೆಯ ತಲಾ 2 ನಗರಸಭೆ ಮತ್ತು ಪುರಸಭೆಗಳ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ದಾಖಲೆ ಪ್ರಮಾಣದಲ್ಲೇ ಉಮೇದುವಾರಿಕೆ ಸಲ್ಲಿಕೆಯಾಗಿವೆ. 31 ವಾರ್ಡ್‌ಗಳ ನಗರಸಭೆಯಾಗಿರುವ ಚನ್ನಪಟ್ಟಣದಲ್ಲಿ ಅತಿ ಹೆಚ್ಚು ಅಂದರೆ 215 ಮಂದಿ ಸ್ಪರ್ಧಾ ಕಣಕ್ಕೆ ಇಳಿದಿದ್ದಾರೆ.
ರಾಮನಗರ ನಗರಸಭೆಯ 31 ವಾರ್ಡ್‌ಗಳಿಗೆ ಸ್ಪರ್ಧೆ ಬಯಸಿ 187 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. 27 ವಾರ್ಡ್‌ಗಳ ಕನಕಪುರ ಪುರಸಭೆಯಲ್ಲಿ 116 ಮತ್ತು 23 ವಾರ್ಡ್‌ಗಳನ್ನು ಹೊಂದಿರುವ ಮಾಗಡಿ ಪುರಸಭೆಯಲ್ಲಿ 124 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವರು.
ಅತೃಪ್ತರ ಆಕ್ರೋಶ: ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಹೋಲಿಸಿದಲ್ಲಿ ಕಾಂಗ್ರೆಸ್ ಬಿ ಫಾರಂ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿತ್ತು. ಅತೃಪ್ತರ ಕೆಂಗಣ್ಣಿಗೆ ಸ್ವತಃ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗುರಿಯಾಗಿದ್ದಾರೆ. ಇನ್ನು, ರಾಮನಗರದಲ್ಲಿ ಬಂಡಾಯ ಶಮನಕ್ಕೆ ಜೆಡಿಎಸ್ ಶಾಸಕ ಕೆ.ರಾಜು ನಡೆಸಿದ ಪ್ರಯತ್ನ ಫಲಿಸಿಲ್ಲ. ಬಂಡುಕೋರರು ದೊಡ್ಡ ರಂಪಾಟವನ್ನೇ ನಡೆಸಿದ್ದಾರೆ. ಮಾಗಡಿಯಲ್ಲಿ ಶಾಸಕ ಬಾಲಕೃಷ್ಣ ಘೋಷಿಸಿದ್ದ ಅಭ್ಯರ್ಥಿಯೊಬ್ಬರ ಎದುರು ಜಿ.ಪಂ. ಅಧ್ಯಕ್ಷ ಮುದ್ದುರಾಜ್ ಯಾದವ್ ತಮ್ಮ ಬೆಂಬಲಿಗ ಒಬ್ಬರನ್ನು ಬಂಡಾಯ ಅಭ್ಯರ್ಥಿಯನ್ನಾಗಿಸಿದ್ದಾರೆ. ಕನಕಪುರದ ಪ್ರತಿಷ್ಠೆಯ ಕಾಳಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದರೂ ಅಸಮಾಧಾನ ಒಳಗೊಳಗೆ ಕುದಿಯುತ್ತಿದೆ. ನೆರೆಯ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವೆಡೆ ಡಬಲ್ ಬಿ ಫಾರಂ ಗೊಂದಲ ಎದುರಾಗಿದ್ದರೆ, ಅದೃಷ್ಟವಶಾತ್ ರಾಮನಗರದಲ್ಲಿ ಅಂತಹ ಪ್ರಮಾದಕ್ಕೆ ಯಾವ ಪಕ್ಷವೂ ಆಸ್ಪದ ನೀಡಿಲ್ಲ. ಬಿ ಫಾರಂಗಾಗಿ ಘರ್ಷಣೆ ಮಟ್ಟಕ್ಕೆ ಹೋದ ಘಟನೆಗಳಿಲ್ಲ.
ಪಕ್ಷವಾರು ವಿವರ: ಜಿಲ್ಲೆಯಲ್ಲಿ ಒಟ್ಟಾರೆ ಸ್ಥಾನಗಳು 112 ಆಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ 111 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಸಿ.ಪಿ.ಯೋಗೇಶ್ವರ್ ಪಕ್ಷಾಂತರದಿಂದ ಬಹುದೊಡ್ಡ ಪೆಟ್ಟು ತಿಂದಿರುವ ಆಡಳಿತಾರೂಢ ಬಿಜೆಪಿಯು 60 ಸ್ಥಾನಗಳಿಗೆ ಮಾತ್ರವೇ ಬಿ ಫಾರಂ ವಿತರಿಸಿ, ಕೈತೊಳೆದುಕೊಂಡಿದೆ.
ಎಲ್ಲ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆಂದು ಘೋಷಿಸಿದ್ದ ಕೆಜೆಪಿ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರತಿಶತ 50ರಷ್ಟು ಸ್ಥಾನಗಳಿಗೂ ಸ್ಪರ್ಧೆ ಒಡ್ಡುವಲ್ಲಿ ಯಶಸ್ವಿಯಾಗಿಲ್ಲ. ಕೆಜೆಪಿ 41 ಮತ್ತು ಬಿಎಸ್‌ಆರ್ ಕಾಂಗ್ರೆಸ್‌ನಿಂದ 46 ಕಡೆ ಅಭ್ಯರ್ಥಿಗಳಿದ್ದಾರೆ.
ಚನ್ನಪಟ್ಟಣದಲ್ಲಿ 2 ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದು, ಬಹುತೇಕ ಅವಿರೋಧ ಆಯ್ಕೆ ಖಚಿತವಾಗಿದೆ. ಎರಡು ವಾರ್ಡ್‌ಗಳಲ್ಲಿ ಒಂದೆಡೆ ಜೆಡಿಎಸ್, ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಇದ್ದಾರೆ. ಹೀಗಾಗಿ ಉಭಯ ಪಕ್ಷಗಳು ತಲಾ 1 ಸ್ಥಾನ ಗೆದ್ದಂತಾಗಿದೆ.
ಸಂಸ್ಥೆವಾರು ವಿವರ: 31 ಸದಸ್ಯ ಬಲದ ಚನ್ನಪಟ್ಟಣದಲ್ಲಿ ಜೆಡಿಎಸ್ 30, ಕಾಂಗ್ರೆಸ್ 30, ಬಿಜೆಪಿ 20, ಕೆಜೆಪಿ 10, ಬಿಎಸ್‌ಆರ್ ಕಾಂಗ್ರೆಸ್ 17 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. 23 ಸದಸ್ಯ ಬಲದ ಮಾಗಡಿ ಪುರಸಭೆಯಲ್ಲಿ ಜೆಡಿಎಸ್ 23, ಕಾಂಗ್ರೆಸ್ 23, ಬಿಜೆಪಿ 12, ಕೆಜೆಪಿ 8, ಬಿಎಸ್‌ಆರ್ ಕಾಂಗ್ರೆಸ್ 6ರಲ್ಲಿ ಸ್ಪರ್ಧಿಸಿವೆ.
ರಾಮನಗರ ನಗರಸಭೆಯಲ್ಲಿ 31 ಸ್ಥಾನಗಳಿವೆ. ಇಲ್ಲಿ ಜೆಡಿಎಸ್ 31, ಕಾಂಗ್ರೆಸ್ 31, ಬಿಜೆಪಿ 18, ಕೆಜೆಪಿ 17, ಬಿಎಸ್‌ಆರ್ ಕಾಂಗ್ರೆಸ್ 13, 27 ಸದಸ್ಯ ಸ್ಥಾನಗಳಿರುವ ಕನಕಪುರ ಪುರಸಭೆಯಲ್ಲಿ ಜೆಡಿಎಸ್ 27, ಕಾಂಗ್ರೆಸ್ 27, ಬಿಜೆಪಿ 10, ಕೆಜೆಪಿ 6, ಬಿಎಸ್‌ಆರ್ ಕಾಂಗ್ರೆಸ್ 10 ಮತ್ತು ಬಿಎಸ್‌ಪಿಯಿಂದ 10 ಅಭ್ಯರ್ಥಿಗಳಿದ್ದಾರೆ.
ಸೋಮವಾರ ಪರಿಶೀಲನೆ: ಚುನಾವಣಾಧಿಕಾರಿಗಳು ಫೆ.25ರಂದು ನಾಮಪತ್ರಗಳ ಪರಿಶೀಲನೆ ನಡೆಸಲಿದ್ದು, ಕ್ರಮಬದ್ಧವಾದ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯು ಮಧ್ಯಾಹ್ನ 3ಕ್ಕೆ ಪ್ರಕಟಗೊಳ್ಳಲಿದೆ. ಆ ಬಳಿಕ ನಾಮಪತ್ರ ಹಿಂತೆಗೆತ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.
ಬಂಡಾಯ ಮತ್ತು ಪಕ್ಷೇತರ ಅಭ್ಯರ್ಥಿಗಳನ್ನು ಮನವೊಲಿಸಿ, ನಾಮಪತ್ರ ವಾಪಸ್ ತೆಗೆಸಲು ನಾನಾ ರೀತಿಯ ಸರ್ಕಸ್ ಈಗಾಗಲೇ ಪ್ರಾರಂಭವಾಗಿದೆ. ಇಲ್ಲೂ ಹಣದ ಆಮಿಷ, ಪರ್ಯಾಯ ಅಧಿಕಾರ ನೀಡುವ ಭರವಸೆಗಳನ್ನು ನೀಡಿ ಮನವೊಲಿಸುವ ಕೆಲಸ ಸಾಗಿದೆ.
-ಮತ್ತೀಕೆರೆ ಜಯರಾಮ್