ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಿವೃತ್ತ ಶಿಕ್ಷಕ ಕೊಲೆ ಪ್ರಕರಣ: ಮೂವರು ಆರೋಪಿಗಳ ಸೆರೆ

Parashurama
Updated On : 25 Feb 2013, 12:47 pm

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ಡಿ ಪಾಳ್ಯ ಗ್ರಾಮದ ನಿವೃತ್ತ ಶಿಕ್ಷಕರನ್ನು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪರಾರಿಯಾಗಿರುವ ಮತ್ತೊಬ್ಬ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ.
ಡಿ ಪಾಳ್ಯ ಗ್ರಾಮದ ನಿವೃತ್ತ ಶಿಕ್ಷಕರಾದ ನರಸಿಂಹ ಶಾಸ್ತ್ರಿ ಅವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಬಗ್ಗೆ ಜ.7 ರಂದು ದೂರು ಸ್ವೀಕರಿಸಿದ ಪೊಲೀಸರು ತನಿಖೆ ಕೈಗೊಂಡು ಕೊಲೆ ಆರೋಪಿಗಳಾದ ಹಿರೇಬಿದನೂರಿನ ನಾರಾಯಣಸ್ವಾಮಿ, ಡಿ ಪಾಳ್ಯದ ಪ್ರಭಾಕರ್ ಮತ್ತು ಶ್ರೀಕಾಂತ್ ಅವರನ್ನು ಬಂಧಿಸಿದ್ದಾರೆ. ಇದೀಗ ಪರಾರಿಯಲ್ಲಿರುವ ಶಿಡ್ಲಘಟ್ಟದ ನಾಗರಾಜ್ ಎಂಬ ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಎನ್. ಶಿವಪ್ರಸಾದ್, ಹಣದ ಆಸೆಯಿಂದ ಡಿ ಪಾಳ್ಯ ಗ್ರಾಮದಲ್ಲಿ ಒಂಟಿ ಜೀವನ ನಡೆಸುತ್ತಿದ್ದ ನಿವೃತ್ತ ಶಿಕ್ಷಕ ನರಸಿಂಹಶಾಸ್ತ್ರಿ ಅವರ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ಭೇದಿಸಲು ಡಿವೈಎಸ್ಪಿ ದೇವಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ನೇತೃತ್ವದಲ್ಲಿ ಮಂಚನೇಹಳ್ಳಿ ಪಿಎಸ್‌ಐ ಸುಧಾಕರೆಡ್ಡಿ, ಗೌರಿಬಿದನೂರು ನಗರ ಠಾಣೆಯ ಪಿಎಸ್‌ಐ ಸೂರ್ಯ ಪ್ರಕಾಶ್, ಗ್ರಾಮಾಂತರ ಠಾಣೆಯ ಪಿಎಸ್‌ಐ ಯಶವಂತ್, ಸಿಬ್ಬಂದಿಗಳಾದ ಚಂದ್ರಶೇಖರಯ್ಯ, ವೆಂಕಟಾಚಲಪತಿ, ಗೌರಿಶಂಕರ, ಮಂಜುನಾಥ, ಶಿವಶಂಕರ್ ಅವರನ್ನೊಳಗೊಂಡಂತೆ ತಂಡ ರಚಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನುಮಾನಾಸ್ಪದ ಕರೆಗಳ ಆಧಾರದ ಮೇಲೆ ತನಿಖೆ ಕೈಗೊಂಡಾಗ ಕೊಲೆ ರಹಸ್ಯ ಹೊರಗೆ ಬಂದಿದೆ ಎಂದರು. ಪ್ರಕರಣ ಭೇದಿಸಿರುವ ಪೊಲೀಸರಿಗೆ 10 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement