ಬಂಗಾರಪೇಟೆ ಪುರಸಭೆ: ಗೆಲವಿಗೆ ಆಮಿಷ ತಂತ್ರ
ಬಂಗಾರಪೇಟೆ: ಇಲ್ಲಿನ ಪುರಸಭೆಯಲ್ಲಿ ತಮ್ಮ ಅಸ್ತಿತ್ವ ತೋರಿಸಲು ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 148 ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಈಗ ತಮ್ಮ ವಾರ್ಡುಗಳಲ್ಲಿ ತಮಗೆ ಅನುಕೂಲವಾಗುವಂತೆ ವಾತಾವರಣ ನಿರ್ಮಿಸಿಕೊಳ್ಳಲು ಪಕ್ಷೇತರ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಹಿಂದೆ ಉಳಿಯುವಂತೆ ಮನವರಿಕೆ ಮಾಡುವ ತಂತ್ರದಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ನಿರತರಾಗಿದ್ದಾರೆ.
ಹಳೇ ಮೀಸಲಾತಿ ಮುಂದುವರಿದಿರುವುದರಿಂದ ಈ ಹಿಂದಿನ ಪುರಸಭೆಯಲ್ಲಿದ್ದ ಬಹುತೇಕ ಸದಸ್ಯರು ಮರು ಆಯ್ಕೆ ಬಯಸಿ ಕಣದಲ್ಲಿ ಉಳಿದಿದ್ದಾರೆ. ಆದರೆ, ಇವರಿಗೆ ಹೊಸ ಮುಖಗಳು ಮತ್ತು ಬಂಡಾಯವಾಗಿ ಕಣದಲ್ಲಿರುವ ಅಭ್ಯರ್ಥಿಗಳು ತಲೆ ನೋವಾಗಿದ್ದಾರೆ.
ಹೇಗಾದರೂ ಮಾಡಿ ಇವರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಿ ಮತ್ತೆ ಪುರಸಭೆಯಲ್ಲಿ ತಮ್ಮ ಛಾಪು ತೋರಿಸಲು ಮುಂದಾಗಿದ್ದಾರೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಇನ್ನೂ ಮೂರು ದಿನಗಳ ಕಾಲಾವಕಾಶ ಇದೆ. ಆದರೆ, ಈಗನಿಂದಲೇ ಪಕ್ಷೇತರರನ್ನು ಮನವೊಲಿಸುವ ಕಾರ್ಯ ಭರ್ಜರಿ ಹಣ ಮತ್ತು ಕಾಣಿಕೆ ನೀಡುವ ಕಾರ್ಯಗಳು ಶನಿವಾರ ರಾತ್ರಿಯಿಂದಲೇ ನಡೆಯುತ್ತಿದೆ.
ಈ ಬಾರಿ ಪುರಸಭೆಯಲ್ಲಿ ಬದಲಾವಣೆ ತರಲೇಬೇಕೆಂಬ ಹಠಕ್ಕೆ ಬಿದ್ದಂತೆ ಜೆಡಿಎಸ್ ಹೋರಾಟ ಮಾಡುತ್ತಿದ್ದರೆ, ಬಿಜೆಪಿ ಶಾಸಕರು ಮಾತ್ರ ಇಂಥಹ ಹೋರಾಟದ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೋಮಾ ಸ್ಥಿತಿಗೆ ತಲುಪಿರುವುದರಿಂದ ಶಾಸಕರ ಗಮನ ಸರ್ಕಾರ ಉಳಿಯುವುದೋ ಬೀಳುವುದೋ ಎಂಬ ಚಿಂತೆಯಲ್ಲಿದ್ದಂತೆ ಇದ್ದಾರೆ.