ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಳಬರು ಪುರಸಭೆ ಮೆಟ್ಟಿಲು ಮತ್ತೆ ಹತ್ತಬಲ್ಲರೇ?

Parashurama
Updated On : 25 Feb 2013, 12:46 pm

ಬಂಗಾರಪೇಟೆ:  ಮಾ.7ರಂದು ನಡೆಯುವ ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಹಳೇ ಮೀಸಲು ಮರುಕಳಿಸಿರುವುದರಿಂದ ಬಹುತೇಕ ಹಾಲಿ ಸದಸ್ಯರು ವಿವಿಧ ಪಕ್ಷಗಳಲ್ಲಿ ಮರು ಆಯ್ಕೆ ಬಯಸಿ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ. ಆದರೆ ಮತದಾರ ಪ್ರಭುಗಳು ಮತ್ತೆ ಇವರುಗಳನ್ನು ಪುರಸಭೆ ಮೆಟ್ಟಿಲು ಹತ್ತಿಸುವುರೇ ಎಂಬುದು ಈಗ ಎಲ್ಲರ ಯಕ್ಷ ಪ್ರಶ್ನೆಯಾಗಿದೆ.
ಇಲ್ಲಿನ ಪುರಸಭೆ 23 ವಾರ್ಡ್‌ಗಳನ್ನು ಹೊಂದಿದೆ. 2007ರ ಮೀಸಲಾತಿಯಲ್ಲೇ ಚುನಾವಣೆ ನಡೆಯುವುದರಿಂದ ಬಹುತೇಕ ಹಾಲಿ ಸದಸ್ಯರಿಗೆ ಮತ್ತೊಮ್ಮೆ ಸ್ಪರ್ಧೆಗೆ ಅವಕಾಶ ದೊರೆತಿದೆ. ಆದರೆ, ಇವರ ಆಡಳಿತದಲ್ಲಿ ಇವರು ಪ್ರತಿನಿಧಿಸಿದ್ದ ವಾರ್ಡ್‌ಗಳಲ್ಲಿ ಎಷ್ಟರಮಟ್ಟಿಗೆ ಜನರ ಸಮಸ್ಯೆಗಳನ್ನು ಈಡೇರಿಸಿದ್ದಾರೆ ಎಂಬುದರ ಮೇಲೆ ಹಾಲಿ ಸದಸ್ಯರ ಭವಿಷ್ಯ ನಿಂತಿದೆ.
23 ವಾರ್ಡ್‌ಗಳಲ್ಲಿ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಉತ್ತಮ ಹೆಸರನ್ನು ಉಳಿಸಿಕೊಂಡಿರುವುದನ್ನು ಬಿಟ್ಟರೆ ಮತ್ತ್ಯಾವ ಸದಸ್ಯರಿಗೂ ವಾರ್ಡ್‌ಗಳಲ್ಲಿ ಒಳ್ಳೆ ಅಭಿಪ್ರಾಯ ಉಳಿಸಿಕೊಂಡಿಲ್ಲ ಇನ್ನು ಕೆಲವರು ಗೆದ್ದವರು ಮತ್ತೆ ವಾರ್ಡ್‌ಗಳ ದರ್ಶನವನ್ನೇ ಮಾಡಿಲ್ಲ,ಇಂತಹವರನ್ನು ಮರು ಆಯ್ಕೆ ಮಾಡಿದರೆ ಪಟ್ಟಣ ಅಭಿವೃದ್ಧಿ ಹೊಂದುವುದಿಲ್ಲ.  ಆದ್ದರಿಂದ ಈ ಬಾರಿ ಪುರಸಭೆಗೆ ಬಹುತೇಕ ಮಂದಿ ಹೊಸ ಮುಖಗಳು ಕಾಲಿಡುವುದು ಖಚಿತವಾಗಿದೆ.
ಪುರಸಭೆ ಅಧ್ಯಕ್ಷರಾಗಿದ್ದ ಕೆ.ಚಂದ್ರಾರೆಡ್ಡಿ ಈ ಬಾರಿ ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. ಎರಡು ಬಾರಿಯೂ ಚಂದ್ರಾರೆಡ್ಡಿ ಬೇರೆ ಬೇರೆ ವಾರ್ಡಿನಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಕಳೆದ ಬಾರಿ ಶಾಂತಿನಗರದಿಂದ ಗೆದ್ದಿದ್ದರೂ ಮತ್ತೆ ಅಲ್ಲೇ ಸ್ಪರ್ಧಿಸಲು ಹಿಂದೇಟು ಹಾಕಿ ವಾರ್ಡ್ ನ.6 ಗಾಂಧಿನಗರದಿಂದ ತಮ್ಮ ಅದೃಷ್ಟ ಪರಿಕ್ಷೀಸಲು ಸಜ್ಜಾಗಿದ್ದಾರೆ.
ಅಲ್ಲಿ ಜೆಡಿಎಸ್‌ನ ಅಭ್ಯರ್ಥಿಯಾಗಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಜಿ.ರಮೇಶ್ ಬಿಜೆಪಿಯಿಂದ ಆದಿನಾರಾಯಣಪ್ಪ ಸ್ಪರ್ಧೆಯಿಂದ ಈ ವಾರ್ಡ್ ಪ್ರತಿಷ್ಟಿತ ವಾರ್ಡ್‌ಗಳಲ್ಲಿ ಒಂದಾಗಿ ಎಲ್ಲರ ಕುತೂಹಲ ಕೆರಳಿಸಿದೆ.
19ನೇ ವಾರ್ಡಿನಲ್ಲಿ ಚಂದ್ರಪ್ಪ ಸಹ ವಾರ್ಡ್ ಪ್ರಗತಿಗೆ ಸಾಕಷ್ಟು ಶ್ರಮಿಸಿರುವುದು ಮರು ಆಯ್ಕೆಗೆ ಸಹಕಾರಿಯಾಗಲಿದೆ. ಅಂತೆಯೇ ವಾರ್ಡ್ ನಂ.11 ರಲ್ಲಿ ಪಕ್ಷೇತರ ಸದಸ್ಯರಾಗಿ ಎರಡು ಬಾರಿ ಜಯಗಲಿಸಿ 13ನೇ ವಾರ್ಡಿನಲ್ಲಿ ಮತ್ತೆ ಸ್ವತಂತ್ರ್ಯ ಅಭ್ಯರ್ಥಿಯಾಗಿ ಹ್ಯಾಟ್ರಿಕ್ ಗೆಲುವು ಬಾರಿಸಿದ ಗಂಗಮ್ಮ ಈಗ 4ನೇ ಬಾರಿ ಕಾಂಗ್ರೆಸ್ ಪಕ್ಷದಿಂದ ಪುರಸಭೆ ಪ್ರವೇಶ ಮಾಡಲು ಅಣಿಯಾಗಿದ್ದಾರೆ.
ನಾಲ್ಕು ಬಾರಿ ಸತತವಾಗಿ ಸದಸ್ಯರಾಗಿ ಆಯ್ಕೆಯಾಗಿ ಸೋಲಿಲ್ಲದ ಸರದಾರ ಎನಿಸಿಕೊಂಡು 4 ಬಾರಿ ಅಧ್ಯಕ್ಷರಾಗಿದ್ದ  ಶಂಷುದ್ದೀನ್ ಬಾಬು 5ನೇ ಬಾರಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಉಳಿದ ವೇಲುಮುರುಗನ್, ಭಾಗ್ಯಲಕ್ಷ್ಮೀ, ರಘುನಾಥಶೆಟ್ಟಿ, ಸುಹೇಲ್, ಶಶಿಕುಮಾರ್, ಮಾಜಿ ಉಪಾಧ್ಯಕ್ಷ ಅಸ್ಲಂ ಪಾಷ, ಪ್ರೇಮಲತಾ ಮತ್ತಿತರರು ಎರಡನೇ ಬಾರಿ ಪುರಸಭೆ ಪ್ರವೇಶಕ್ಕೆ ತಾಲೀಮು ನಡೆಸಿದ್ದಾರೆ.
ಆದರೂ ಅವರಿಗೆ ಯುವಕರ ತಂಡ ಸೆಡ್ಡು ಹೊಡೆದು ನಿಂತಿದ್ದಾರೆ. ಬಹುತೇಕ ವಾರ್ಡುಗಳಲ್ಲಿ ಕುಡಿಯುವ ನೀರಿನದ್ದೇ ಸಮಸ್ಯೆ. ತಿಂಗಳಿಗೊಮ್ಮೆ ಪುರಸಭೆ ನೀರು ಪೂರೈಸುತ್ತಿದೆ. ಈ ಸಮಸ್ಯೆಯನ್ನು ಸಮರ್ಥವಾಗಿ ನೀಗಿಸಬಲ್ಲ ಮತ್ತು ವಾರ್ಡಿನ ಸಮಸ್ಯೆಗಳನ್ನು ಪುರಸಭೆಗಳಲ್ಲಿ ದನಿಯತ್ತ ಬಲ್ಲ ವ್ಯಕ್ತಿಗಳಿಗೆ ಮತ ಹಾಕಲು ಮತದಾರರು ತಿರ್ಮಾಣಿಸಿರುವುದು ಕಳೆದ ಪುರಸಭೆಯಲ್ಲಿ ಬಾಯಿಗೆ ಬೀಗ ಹಾಕಿಕೊಂಡಿದ್ದವರಿಗೆ ಹಿನ್ನಡೆಯಾಗುವ ಲಕ್ಷಣಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement